ಕಾಸರಗೋಡು: ಹೊಸದುರ್ಗ ತಾಲೂಕು ಮಟ್ಟದಲ್ಲಿ ನಡೆದ ದೂರು ಪರಿಹಾರ ಅದಾಲತ್ ಎಂಡೋಸಲ್ಫಾನ್ ಸಂತ್ರಸ್ತರ ಅಹವಾಲು ಸ್ವೀಕರಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತವಾಗಿ ನೀಡಲಾಗುತ್ತಿರುವ ಔಷಧ, ಸಾರಿಗೆ ಸೌಲಭ್ಯ ಮುಂದುವರಿಯಲಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಮೊಹಮ್ಮದ್ ರಿಯಾಸ್ ತಿಳಿಸಿದ್ದಾರೆ. ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರ ಒಕ್ಕೂಟ ಅಧ್ಯಕ್ಷೆ ಮುನೀಸಾ ಅಂಬಲತ್ತರ, ಕಾರ್ಯದರ್ಶಿಅಂಬಲತ್ತರ ಕುಞÂಕೃಷ್ಣನ್ ಅವರು ಸಂತ್ರಸ್ತರ ಸಂಕಷ್ಟವನ್ನು ಸಚಿವರ ಬಳಿ ನಿವೇದಿಸಿಕೊಂಡಿದ್ದರು.
ಎಂಡೋಸಂತ್ರಸ್ತ ರೋಗಿಗಳಿಗೆ ಯಾವುದೇ ಮಾತ್ರಕ್ಕೂ ಔಷಧಿ ಪೂರೈಕೆ ನಿಲ್ಲಿಸದಂತೆ ಹಾಗೂ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತಲುಪಲು ವಾಹನಗಳನ್ನು ಒದಗಿಸುವಂತೆ ಸಚಿವರು ಜಿಲ್ಲಾ ವೈದ್ಯಾಧಿಕಾರಿಗೆ ಸೂಚಿಸಿದರು. ಪ್ರತ್ಯೇಕ ವೈದ್ಯಕೀಯ ಶಿಬಿರ ನಡೆಸಲು ಹಾಗೂ ಎಂಡೋಸಲ್ಫಾನ್ ಸಂತ್ರಸ್ತರನ್ನು ಸಮನ್ವಯಗೊಳಿಸಲು ಪುನರ್ವಸತಿ ಕೋಶದ ನಿರ್ಧಾರವನ್ನು ತುರ್ತಾಗಿ ಜಾರಿಗೊಳಿಸುವಂತೆ ಎರಡು ದಿವಸಗಳ ಹಿಂದೆ ಕಾಸರಗೋಡಿನಲ್ಲಿ ನಡೆದ ಅದಾಲತ್‍ನಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಎಂ.ರಾಮದಾಸ್ ಅವರಿಗೆ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ಸೂಚನೆ ನೀಡಿದ್ದರು. ವೈದ್ಯಕೀಯ ಶಿಬಿರ ನಡೆಸಲು ಸ್ಥಳ ನಿರ್ಣಯ ನಡೆಸುವುದರ ಜತೆಗೆ ವೈದ್ಯಕೀಯ ಶಿಬಿರಕ್ಕೆ ಅಗತ್ಯವಿರುವ ವೈದ್ಯರನ್ನು ನೇಮಿಸಿಕೊಳ್ಳಲು ಅದಾಲತ್‍ನಲ್ಲಿ ಲಭಿಸಿದ ಎಂಡೋ ಸಂತ್ರಸ್ತರ ದೂರುಗಳನ್ನು ಪರಿಗಣಿಸಿ, ಸಚಿವೆ ವೀಣಾ ಜಾರ್ಜ್ ಅವರೂ ನಿರ್ದೇಶ ನೀಢಿದ್ದರು.
ಈ ಮಧ್ಯೆ, ರಾಜ್ಯ ಸರ್ಕಾರವು 2022-23ನೇ ವಾರ್ಷಿಕ ಯೋಜನೆಯನ್ವಯ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಔಷಧ ಮತ್ತು ಚಿಕಿತ್ಸೆಗಾಗಿ ಹಣವನ್ನು ಮೀಸಲಿಟ್ಟಿದೆ. ಹೊಸ ಆರ್ಥಿಕ ವರ್ಷಕ್ಕೆ ಅಗತ್ಯವಿರುವ ಹಣ ಮಂಜೂರುಗೊಳಿಸಲು ಹಣಕಾಸು ಇಲಾಖೆಯ ಅನುಮೋದನೆಗೆ ಕಾಯುತ್ತಿದ್ದು, ಸಚಿವ ಮುಹಮ್ಮದ್ ರಿಯಾಸ್ ಮಧ್ಯಸ್ಥಿಕೆಯಿಂದ ಶೀಘ್ರ ಹಣ ಮಂಜೂರಾಗಿ ಲಭಿಸುವ ಸಾಧ್ಯತೆಯಿದೆ.
ತಿರುವನಂತಪುರದಲ್ಲಿ ಎಂಡೋ ಸಭೆ:
ಜಿಲ್ಲೆಯ ಎಂಡೋ ಸುಲ್ಫಾನ್ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಹಣಕಾಸು ಸಚಿವರು ಹಾಗೂ ಆರೋಗ್ಯ ಸಚಿವರೊಂದಿಗೆ ಜೂನ್ ತಿಂಗಳಲ್ಲಿ ತಿರುವನಂತಪುರದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳೂ ಭಾಗವಹಿಸಲಿದ್ದು, ಸರ್ಕಾರದ ಮಟ್ಟದಲ್ಲಿ ಪರಿಹರಿಸಬೇಕಾದ ಸಮಸ್ಯೆಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳಲು ತಿರುವನಂತಪುರದಲ್ಲಿ ಎಂಡೋ ಸೆಲ್ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.