ಕಾಸರಗೋಡು: ಜಿಲ್ಲಾದ್ಯಂತ ಶನಿವಾರ ಸಾಮಾನ್ಯ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಸಿಡಿಲು, ಮಿಂಚು ಒಳಗೊಂಡ ಮಳೆಯಾಗಿದೆ. ಗೃಹಪ್ರವೇಶ, ಮದುವೆ ಸೇರಿದಂತೆ ನಾನಾ ಸಮಾರಂಭಗಳಿಗೆ ತೆರಳುವವರಿಗೆ ಮಳೆಯಿಂದ ಸಮಸ್ಯೆ ಉಂಟಾಗಿತ್ತು.
ಶುಕ್ರವಾರ ಸಂಜೆ ಹಾಗೂ ರಾತ್ರಿ ಸುರಿದ ಬಿರುಸಿನ ಮಳೆಗೆ ಕುಂಬಳೆ ಪೇಟೆಯಲ್ಲಿ ನೆರೆಯ ವಾತಾವರಣ ಸೃಷ್ಟಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಹರಿದು ಸಾಗಲಾಗದೆ ಪೇಟೆ ಜಲಾವೃತವಾಗಿತ್ತು. ರಸ್ತೆ ಅಂಚಿಗಿರುವ ವ್ಯಾಪಾರಿ ಸಂಸ್ಥೆಗಳಿಗೆ ನೀರು ನುಗ್ಗಿ, ಸಾಮಗ್ರಿ ಹಾನಿಯುಂಟಾಗಿದೆ. ಕುಂಬಳೆ-ಬದಿಯಡ್ಕ ರಸ್ತೆಯ ಹೋಟೆಲ್ ಒಂದಕ್ಕೆ ಮಣ್ಣು ಮಿಶ್ರಿತ ನೀರು ನುಗ್ಗಿ ಹಾನಿ ಸಂಭವಿಸಿದೆ. ಚೇರಂಗೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಕುಂಬಳೆ ಆಸುಪಾಸು ಬಿರುಸಿನ ಮಳೆಗೆ ತೆಂಗಿನಮರಗಳು ಬುಡಸಹಿತ ಕಳಚಿಬಿದ್ದಿದೆ.
ಕುಂಬಳೆ-ಮುಳ್ಳೇರಿಯ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಬದಿಯಡ್ಕ ಪೇಟೆಯಲ್ಲೂ ಮಳೆಯಿಂದ ವ್ಯಾಪಾರಿಗಳಿಗೆ ಹಾನಿ ಉಂಟಗಿದೆ.
ಚಿತ್ರ(1) ಕುಂಬಳೆ ಪೇಟೆಯ ವ್ಯಾಪಾರಿ ಸಂಸ್ಥೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಚಿತ್ರ(2): ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕುಂಬಳೆಯಲ್ಲಿ ನೆರೆನೀರಿನೊಂದಿಗೆ ಮಣ್ಣುಕೊಚ್ಚಿಕೊಂಡು ಹೋಗಿದೆ.