ನವದೆಹಲಿ: ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿರುವುದಕ್ಕೆ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಹೊಸ ಸಂಸತ್ ಭವನದಲ್ಲಿ ನ್ಯಾಯದ ಪ್ರತೀಕವಾಗಿ ಸ್ಥಾಪಿಸಲಾದ 'ಸೆಂಗೊಲ್' ಮೊದಲ ದಿನವೇ "ಅಪಮಾನ"ವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೆಂಗೋಲ್ ರಾಜದಂಡ, ಆಡಳಿತದ ಸಂಕೇತವಾಗಿದೆ ಮತ್ತು ನ್ಯಾಯವನ್ನು ಎತ್ತಿಹಿಡಿಯುತ್ತದೆ. ಪ್ರಧಾನಿ ಮೋದಿ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಉದ್ಘಾಟಿಸಿದ ನೂತನ ಸಂಸತ್ ಭವನದಲ್ಲಿ ಇದನ್ನು ಸ್ಥಾಪಿಸಲಾಗಿದೆ.
ಇದೇ ವೇಳೆ ಮಹಿಳಾ 'ಮಹಾಪಂಚಾಯತ್' ಗಾಗಿ ಹೊಸ ಸಂಸತ್ ಭವನದ ಕಡೆಗೆ ತೆರಳಲು ಪ್ರಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಭದ್ರತಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರನ್ನು ವಶಕ್ಕೆ ಪಡೆದು, ಬಸ್‌ಗಳಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು.
ಬಿಜೆಪಿ ಸಂಸದ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ಏಪ್ರಿಲ್ 23 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಕುಸ್ತಿಪಟುಗಳ ಬಂಧನಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು, ಮಹಿಳಾ ಕುಸ್ತಿಪಟುಗಳು ಬಿಜೆಪಿ ಸಂಸದನ ವಿರುದ್ಧ ಆರೋಪ ಮಾಡಿ ತಿಂಗಳುಗಳು ಕಳೆದಿವೆ. ಆದರೆ ಇದುವರೆಗೂ ಕೇಸರಿ ಪಕ್ಷದ ನಾಯಕರು ಆರೋಪಿ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದರೆ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಎಳೆದೊಯ್ದು ಪೊಲೀಸರು ವಶಕ್ಕೆ ಪಡೆದಿರುವುದು ಖಂಡನೀಯ. ಮೊದಲ ದಿನವೇ ಸೆಂಗೋಲ್ ಗೆ ಅಪಮಾನ ಮಾಡಿದ್ದನ್ನು ಇದು ತೋರಿಸುತ್ತದೆ. ಪ್ರತಿಪಕ್ಷಗಳ ಬಹಿಷ್ಕಾರದ ಮಧ್ಯೆ ರಾಷ್ಟ್ರಪತಿಯನ್ನು ಕಡೆಗಣಿಸಿ ಹೊಸ ಸಂಸತ್ ಭವನ ಉದ್ಘಾಟನೆಯ ದಿನದಂದು ಇಂತಹ ದೌರ್ಜನ್ಯ ನಡೆಯುವುದು ನ್ಯಾಯವೇ'' ಎಂದು ತಮಿಳುನಾಡು ಸಿಎಂ ಪ್ರಶ್ನಿಸಿದ್ದಾರೆ.