ನವದೆಹಲಿ: 'ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ವಿವಿಧ ಕ್ಷೇತ್ರಗಳ ಗಣ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ (ಎಲ್‌ಜಿ) ನೀಡಿದರೆ ಅವರು ಚುನಾಯಿತ ಆಡಳಿತ ಮಂಡಳಿಯನ್ನು ಅಸ್ಥಿರಗೊಳಿಸಬಹುದು. ಅದಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ' ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಎಂಸಿಡಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಸಂಬಂಧ ಲೆಫ್ಟಿನೆಂಟ್ ಗವರ್ನರ್‌ಗೆ ಇರುವ ಅಧಿಕಾರವನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ತೀರ್ಪು ಕಾಯ್ದಿರಿಸಿದೆ.
'ವಿವಿಧ ಕ್ಷೇತ್ರಗಳ 12 ಮಂದಿಯನ್ನು ಎಂಸಿಡಿಗೆ ನಾಮನಿರ್ದೇಶನ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಇಷ್ಟೊಂದು ಆಸಕ್ತಿ ತೋರುತ್ತಿರುವುದಾದರೂ ಏಕೆ. ನಾಮನಿರ್ದೇಶಿತ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ. ಅವರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ ನೀಡಿದ್ದೇ ಆದಲ್ಲಿ ಗವರ್ನರ್ ಅವರು ಚುನಾಯಿತ ಆಡಳಿತ ಮಂಡಳಿಯನ್ನೇ ಅಸ್ಥಿರಗೊಳಿಸಬಹುದು' ಎಂದು ನ್ಯಾಯಪೀಠ ಹೇಳಿದೆ.