ತಿರುವನಂತಪುರಂ : ಕೇರಳದಲ್ಲಿ ಎಲ್‌ಡಿಎಫ್ ನೇತೃತ್ವದ ಸರ್ಕಾರವು ಶನಿವಾರ ಎರಡು ವರ್ಷದ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ 'ದಿ ರಿಯಲ್ ಕೇರಳ ಸ್ಟೋರಿ' ಎಂಬ ಜಾಹೀರಾತನ್ನು ಬಿಡುಗಡೆ ಮಾಡಿದೆ. ವಿವಾದಾತ್ಮಕ ಚಲನಚಿತ್ರ 'ದಿ ಕೇರಳ ಸ್ಟೋರಿ' ಚಲನಚಿತ್ರದ ಶೀರ್ಷಿಕೆಯನ್ನು ಈ ಜಾಹೀರಾತಿನ ಶೀರ್ಷಿಕೆ ಹೋಲುತ್ತದೆ.
ಪ್ರಮುಖ ರಾಷ್ಟ್ರೀಯ ದಿನ ಪತ್ರಿಕೆಗಳಲ್ಲಿ ಬಿಡುಗಡೆಯಾಗಿರುವ ಜಾಹೀರಾತನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, 'ಸಾಮಾಜಿಕ ನ್ಯಾಯವನ್ನು ಅಪ್ಪಿಕೊಳ್ಳುವ ಮೂಲಕ ತಮ್ಮ ಸರ್ಕಾರವು ಸರ್ವರನ್ನೂ ಸಬಲೀಕರಣಗೊಳಿಸುಂಥ ಅಭಿವೃದ್ಧಿಯ ಕೆಲಸವನ್ನು ಮಾಡುತ್ತಿದೆ' ಎಂದಿದ್ದಾರೆ.
'ಎಲ್ಲಿ ಕನಸುಗಳು ಅರಳುತ್ತವೆಯೋ, ಎಲ್ಲಿ ಮಾನವೀಯತೆ ಪ್ರವಹಿಸುತ್ತದೆಯೋ ಅಂಥ ಕೇರಳದಲ್ಲಿ ನಾವು 'ದಿ ರಿಯಲ್ ಕೇರಳ ಸ್ಟೋರಿ'ಯನ್ನು ಆಚರಿಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
'ಭಾರತದ ಕಿರೀಟದಲ್ಲಿನ ವಜ್ರ' ಎಂದು ಕೇರಳವನ್ನು ಈ ಜಾಹೀರಾತಿನಲ್ಲಿ ವ್ಯಾಖ್ಯಾನಿಸಲಾಗಿದೆ. ಹಾಗೆಯೇ, ರೈತರು, ಆರೋಗ್ಯ ಕಾರ್ಯಕರ್ತರು, ತೃತೀಯಲಿಂಗಿಗಳ ಹಾಗೂ ಇತರರ ಜೊತೆ ಪಿಣರಾಯಿ ವಿಜಯನ್ ಅವರಿದ್ದಾರೆ ಎಂಬುದನ್ನು ಜಾಹೀರಾತು ಸೂಚಿಸುತ್ತದೆ.
ಇದೇ ವೇಳೆ, ತಮ್ಮ ಸರ್ಕಾರದ ವಿರುದ್ಧ ಹೊರಿಸಿದ್ದ ಆರೋಪಗಳನ್ನು ಈ ಜಾಹೀರಾತಿನಲ್ಲಿ ಅಲ್ಲಗಳೆಯಲಾಗಿದೆ ಹಾಗೂ ಕಳೆದ ಎರಡು ವರ್ಷದಲ್ಲಿ ಸರ್ಕಾರವು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರಣೆ ನೀಡಲಾಗಿದೆ.