ಕಾಸರಗೋಡು: ಕೇರಳ ರಾಜ್ಯಾದ್ಯಂತ ಜೂ. 1ರಂದು ಶಾಲೆಗಳು ಪುನರಾರಂಭಗೊಳ್ಳಲಿದ್ದು, ಕಾಸರಗೋಡು ಜಿಲ್ಲೆಯಲ್ಲೂ ಸಿದ್ಧತೆ ಪೂರ್ತಿಗೊಂಡಿದೆ. ರಾಜ್ಯ, ಜಿಲ್ಲೆ, ಉಪಜಿಲ್ಲೆ, ಪಂಚಾಯಿತಿ ಮಟ್ಟದ ಜತೆಗೆ ಪ್ರತಿ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ಆಯೋಜಿಸಲಾಗಿದೆ.
ರಾಜ್ಯದಲ್ಲಿ ಸುಮಾರು 4ಲಕ್ಷ ಮಕ್ಕಳು ಒಂದನೇ ತರಗತಿಗೆ ಹೊಸದಾಗಿ ಸೇರ್ಪಡೆಗೊಳ್ಳಲಿದ್ದಾರೆ. ಈಗಾಗಲೇ ಶಾಲಾ ಮಟ್ಟದಲ್ಲಿ ಪ್ರವೇಶೋತ್ಸವ ಸಿದ್ಧತಾ ಸಭೆ ನಡೆಸಲಾಗಿದೆ. ಶಾಲಾ ರಕ್ಷಕ ಶಿಕ್ಷಕ ಸಂಘ, ಶಾಲಾ ಅಧಿಕಾರಿಗಳು, ಶಿಕ್ಷಕ ವೃಂದ ಸಭೆ ಸೇರಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣದ ಬಗ್ಗೆ ಖಚಿತಪಡಿಸಿಕೊಂಡಿದೆ. ಶಾಲಾ ವಠಾರದಲ್ಲಿನ ಮುರಿದು ಬೀಳಬಹುದಾದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವುದರ ಜತೆಗೆ ಪರಿಸರ ಶುಚೀಕರಣ ಕಾರ್ಯವನ್ನೂ ಪೂರೈಸಲಾಗಿದೆ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಯಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಹೊಸದಾಗಿ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ಈಗಾಗಲೇ ಅಲಂಕರಿಸಲಾಗಿದೆ. ಶಾಲಾ ಕೊಠಡಿಯನ್ನು ನೀರು ಹಾಯಿಸಿ ಶುಚೀಕರಿಸಿ ಬೆಂಚು, ಡೆಸ್ಕ್‍ಗಳನ್ನು ಪೇರಿಸಿಡುವ ಕೆಲಸಕಾರ್ಯಗಳೂ ಬುಧವಾರ ನಡೆದಿದೆ.
ರಾಜ್ಯ ಮಟ್ಟದ ಶಾಲಾ ಪ್ರವೇಶೋತ್ಸವವನ್ನು ತಿರುವನಂತಪುರದ ಮಲಯಾನ್‍ಕಿಳ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಲಿದ್ದಾರೆ. ಕಾಸರಗೋಡು ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ ಬೇಕಲ ಸನಿಹದ ತಚ್ಚಂಗಾಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ. ಬೆರಳೆಣಿಕೆಯ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇಲ್ಲಿ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳು ನೀರಿನ ಪೂರೈಕೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಉಳಿದಂತೆ ಪ್ರವೇಶೋತ್ಸವಕ್ಕೆ ಶೈಕ್ಷಣಿಕ ಜಿಲ್ಲೆ ಎಲ್ಲ ರಈತಿಯಲ್ಲೂ ಸಜ್ಜುಗೊಂಡಿರುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶ್ ತಿಳಿಸಿದ್ದಾರೆ.
ಶಾಲಾ ಪ್ರವೇಶೋತ್ಸವ ಹಿನ್ನೆಲೆಯಲ್ಲಿ ಕಾಸರಗೋಡು ಬಾಲಭವನ ಆಂಗ್ಲಮಾಧ್ಯಮ ಶಾಲೆಯಲ್ಲಿ ತಳಿರುತೋರಣ ನಿರ್ಮಾಣದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹಾಗೂ ಹೆತ್ತವರು.