ಕೊಲ್ಲಂ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ರೋಗಿಯಿಂದ ಚಾಕುವಿನಿಂದ ಇರಿದು ಸಾವಿಗೊಳಗಾದ ಯುವ ವೈದ್ಯೆ ವಂದನಾ ದಾಸ್ ಅವರ ಅಂತ್ಯಕ್ರಿಯೆ ಮಡುಗಟ್ಟಿದ ದುಃಖ, ದುಮ್ಮಾನಗಳ ರೋದನದ ನಡುವೆ ನಿನ್ನೆ ನಡೆಯಿತು.
ಕೊಟ್ಟಾಯಂನ ಮುಟ್ಟುಚಿರಾದಲ್ಲಿರುವ ಅವರ ಮನೆಯಲ್ಲಿ ಡಾ.ವಂದನಾ ಅವರ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ವಂದನಾ ಅವರ ತಾಯಿಯ ಅಣ್ಣನ ಮಗ ನಿವೇದ್ ಚಿತೆಗೆ ಅಗ್ನಿಸ್ಪರ್ಶಗೈದ. ಪಟ್ಟಲಮುಕ್‍ನ ಮುತ್ತುಚಿರವರ ಮನೆಗೆ ತರಲಾದ ಮೃತದೇಹಕ್ಕೆ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು. ತಂದೆ ಮೋಹನ್ ದಾಸ್ ಹಾಗೂ ತಾಯಿ ವಸಂತಕುಮಾರಿ ತಮ್ಮ ಏಕೈಕ ಪುತ್ರಿಯನ್ನು ಅಂತಿಮ ಆಲಿಂಗನ ನೀಡಿ ಬೀಳ್ಕೊಟ್ಟರು. ಅಪಾರ ಜನಸ್ತೋಮದ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು. ಸಮಾರಂಭದ ವೇಳೆ ಅಸ್ವಸ್ಥಗೊಂಡ ತಾಯಿ ವಸಂತಕುಮಾರಿ ಅವರಿಗೆ ಅಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದರು.
ಕೇಂದ್ರ ಸಚಿವ ವಿ ಮುರಳೀಧರನ್, ಸಚಿವ ವಿಎನ್ ವಾಸವನ್, ಸ್ಪೀಕರ್ ಎಎನ್ ಶಂಸೀರ್, ಸಂಸದ ಥಾಮಸ್ ಚಾಜಿಕ್ಕಡನ್, ಶಾಸಕರಾದ ತಿರುವಂಜೂರು ರಾಧಾಕೃಷ್ಣನ್, ಮಾನ್ಸ್ ಜೋಸೆಫ್ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ವಂದನಾ ದಾಸ್ ಓದುತ್ತಿದ್ದ ಅಜೀಜಿಯಾ ಮೆಡಿಕಲ್ ಕಾಲೇಜಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿದ್ದ ಮೃತದೇಹವನ್ನು ಮೊನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮುಟ್ಟುಚಿರ ಮನೆಗೆ ತರಲಾಯಿತು. ರಾತ್ರಿ 8.05ಕ್ಕೆ ಪಟ್ಟಲಮುಕ್ ಬಳಿಯ ಮನೆಗೆ ಪಾರ್ಥಿವ ಶರೀರವನ್ನು ತರುವಾಗ ಇಡೀ ಗ್ರಾಮವೇ ಕಾಯುತ್ತಿತ್ತು. ಮನೆಯ ಮುಂದೆ ವಿಶೇಷವಾಗಿ ಸಿದ್ಧಪಡಿಸಿದ ಚಪ್ಪರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೊನ್ನೆ ಬೆಳಗ್ಗೆ ಈ ಅಮಾನುಷ ಘಟನೆ ನಡೆದಿತ್ತು. ಕೊಟ್ಟಾಯಂ ಮೂಲದ 23 ವರ್ಷದ ವೈದ್ಯೆ ವಂದನಾ ದಾಸ್ ಪೆÇಲೀಸರ ಸಮ್ಮುಖದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ವಂದನಾ ಕೊಲ್ಲಂನ ಅಜೀಜಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್‍ನಲ್ಲಿ ಎಂಬಿಬಿಎಸ್ ಮುಗಿಸಿದ ನಂತರ ಹೌಸ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನೆಡುಂಬನ ಯುಪಿ ಶಾಲೆಯ ಶಿಕ್ಷಕ ಪೂಯಪಲ್ಲಿ ಮೂಲದ ಸಂದೀಪ್ (42) ಕೊಲೆ ನಡೆಸಿದವ. ಸಂದೀಪ್ ಮನೆ ಬಳಿಯ ಜನರೊಂದಿಗೆ ಹೊಡೆದಾಟದಲ್ಲಿ ಗಾಯಗೊಂಡಿದ್ದ. ನಂತರ ಸಂದೀಪ್ ನನ್ನು ಕೊಟ್ಟಾರಕ್ಕರ ಆಸ್ಪತ್ರೆಗೆ ಕರೆತಂದು ಗಾಯಕ್ಕೆ ಹೊಲಿಗೆ ಹಾಕುತ್ತಿದ್ದಾಗ ಸಂದೀಪ್ ಅಲ್ಲೇ ಇದ್ದ ಕತ್ತರಿ ತೆಗೆದುಕೊಂಡು ವೈದ್ಯರ ಕುತ್ತಿಗೆಗೆ ಇರಿದಿದ್ದಾನೆ. ಸಂದೀಪ್ ನನ್ನು ಕೋರ್ಟ್ ರಿಮಾಂಡ್ ಮಾಡಿ ಪೂಜಾಪುರ ಜೈಲಿಗೆ ಕಳುಹಿಸಿದೆ.