HEALTH TIPS

ದೇಶದ ಜನಗಣತಿ ಏಕೆ ವಿಳಂಬಗತಿ?

                 ವದೆಹಲಿಪ್ರತಿ 10 ವರ್ಷಕ್ಕೊಮ್ಮೆ ಕೈಗೊಳ್ಳಲಾಗುವ ಜನಗಣತಿ ಕಾರ್ಯವು 2021ರಲ್ಲಿ ಮೊದಲ ಬಾರಿಗೆ ನಿಗದಿತ ಅವಧಿಯಲ್ಲಿ ಜರುಗಲಿಲ್ಲ. ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಮುಂದೂಡಿ ಎರಡು ವರ್ಷಗಳೇ ಗತಿಸಿದರೂ ಈ ಮಹತ್ವದ ಪ್ರಕ್ರಿಯೆಯನ್ನು ಇದುವರೆಗೂ ಪುನರಾರಂಭಿಸಿಲ್ಲ.             ಯಾವಾಗ ಮಾಡುತ್ತಾರೆಂಬುದು ಕೂಡ ಅನಿಶ್ಚಿತವಾಗಿದೆ.

                          ಭಾರತದಲ್ಲಿ ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ಕೈಗೊಳ್ಳಲಾಗುತ್ತದೆ. 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸಬೇಕೆಂಬ ಯಾವುದೇ ಕಾನೂನು ಇಲ್ಲದಿದ್ದರೂ, ಈ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಆದರೆ, 2021ರಲ್ಲಿ ಈ ಸಂಪ್ರದಾಯ ಮುರಿದುಬಿದ್ದಿತು. ಈ ಹಿಂದೆ ಕೊನೆಯ ಬಾರಿ ಜನಗಣತಿ ನಡೆದಿದ್ದು 2011ರಲ್ಲಿ. ಇದಾಗಿ 13 ಗತಿಸಿದರೂ ಮುಂದಿನ ಜನಗಣತಿಯನ್ನು ಯಾವಾಗ ಮಾಡಲಾಗುತ್ತದೆ ಎಂಬುದು ಇನ್ನೂ ನಿಗದಿಯಾಗಿಲ್ಲ.

               ಈ ವರ್ಷದ ಮಧ್ಯದ ವೇಳೆಗೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಲು ಸಿದ್ಧವಾಗಿದೆ ಎಂದು ವಿಶ್ವ ಸಂಸ್ಥೆಯ ಜನಸಂಖ್ಯೆ ನಿಧಿಯು ಕಳೆದ ತಿಂಗಳು ಹೇಳಿದೆ. ಈ ವೇಳೆಗೆ ಭಾರತದ ಜನಸಂಖ್ಯೆಯು 142.8 ಕೋಟಿ ಆಗಲಿದ್ದು, ಚೀನಾದ ಜನಸಂಖ್ಯೆಯಾದ 142.5 ಕೋಟಿಗಿಂತ ಸ್ವಲ್ಪ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಕೈಗೊಳ್ಳಲಾಗುವ ಜನಗಣತಿಯಂತೆ 2021ರಲ್ಲಿ ಈ ಪ್ರಕ್ರಿಯೆಯನ್ನು ನಡೆಸಿದ್ದರೆ ಭಾರತದ ಜನಸಂಖ್ಯೆಯನ್ನು ಬಹುತೇಕ ನಿಖರವಾಗಿ ಹೇಳಲು ಸಾಧ್ಯವಿರುತ್ತಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ಕಾರಣದಿಂದಾಗಿ 2021 ಜನಗಣತಿಯನ್ನು ಮುಂದೂಡಬೇಕಾಯಿತು, ಸದ್ಯದ ಪ್ರಕಾರ ಜನಗಣತಿಯನ್ನು ಯಾವಾಗ ನಡೆಸಲಾಗುತ್ತದೆ ಎಂಬುದರ ಬಗೆಗೆ ಯಾವುದೇ ಸ್ಪಷ್ಟತೆ ಇಲ್ಲ. ಜನರ ನಿಜವಾದ ಎಣಿಕೆ ಕಾರ್ಯವನ್ನು ಸಾಂಪ್ರದಾಯಿಕವಾಗಿ ಜನಗಣತಿ ವರ್ಷದ ಫೆಬ್ರವರಿ ತಿಂಗಳಲ್ಲಿ ಮಾಡಲಾಗುತ್ತದೆ. ಇದೇ ಅಭ್ಯಾಸವನ್ನು ಅನುಸರಿಸಿದರೆ, ಮುಂದಿನ ವರ್ಷ ಫೆಬ್ರವರಿಯಲ್ಲಿ ಜನಗಣತಿಯನ್ನು ಮಾಡಬೇಕು. ಆದರೆ, ಲೋಕಸಭೆ ಚುನಾವಣೆ ಸಮೀಪಿಸುವುದರಿಂದ ಅದು ಸಾಧ್ಯವಾಗಲಿಕ್ಕಿಲ್ಲ.

ಮೊದಲ ಬಾರಿಗೆ ತಪ್ಪಿತು

                  ಜನಗಣತಿ ಕಾರ್ಯವನ್ನು 1881ರಿಂದ ತಪ್ಪದೆ ಪ್ರತಿ ದಶಕದ ಮೊದಲ ವರ್ಷದಲ್ಲಿ ನಡೆಸಲಾಗುತ್ತಿದೆ. ಭಾರತದ ಜನಗಣತಿ ಕಾರ್ಯಾಚರಣೆಗಳ 150 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2021ರಲ್ಲಿ ಈ ಪ್ರಕ್ರಿಯೆಯು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿಲ್ಲ. ಕುತೂಹಲಕಾರಿ ಸಂಗತಿ ಎಂದರೆ, ಕೋವಿಡ್ ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬಂದು, ಸಹಜ ಸ್ಥಿತಿಯ ಮರುಸ್ಥಾಪನೆಯ ನಂತರವೂ ಜನಗಣತಿ ಕಾರ್ಯವು ಬಾಕಿ ಉಳಿದಿದೆ. ಬಹುತೇಕ ದೇಶಗಳು ಕೂಡ ತಮ್ಮ ಜನಗಣತಿಗಾಗಿ 10 ವರ್ಷಗಳ ಚಕ್ರವನ್ನು ಅನುಸರಿಸುತ್ತವೆ. ಐದು ವರ್ಷಗಳಿಗೊಮ್ಮೆ ಇದನ್ನು ಮಾಡುವ ಆಸ್ಟ್ರೇಲಿಯಾದಂತಹ ದೇಶಗಳು ಕೂಡ ಇವೆ.


ಉಪಯುಕ್ತತೆ

                  ಜನಗಣತಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ಮಾಡುವುದು ಕಾನೂನಿನ ಪ್ರಕಾರ ಅನಿವಾರ್ಯವಲ್ಲವಾದರೂ ಜನಗಣತಿಯ ಉಪಯುಕ್ತತೆಯ ಕಾರಣದಿಂದಾಗಿ ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡಿಕೊಂಡು ಬರಲಾಗಿದೆ. ಜನಗಣತಿಯು ಪ್ರಾಥಮಿಕ ಹಾಗೂ ಅಧಿಕೃತ ಅಂಕಿ-ಅಂಶಗಳನ್ನು ಒದಗಿಸುತ್ತದೆ. ಯೋಜನೆಗಳನ್ನು ರೂಪಿಸುವ, ಆಡಳಿತಾತ್ಮಕ ಮತ್ತು ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಅಂಕಿ-ಆಂಶಗಳಿಗೆ ಜನಗಣತಿಯು ಬೆನ್ನೆಲುಬಾಗಿ ನಿಲ್ಲುತ್ತದೆ. ಇದು ಸಾಮಾಜಿಕ, ಆರ್ಥಿಕ ಮತ್ತು ಇತರ ಸೂಚಕಗಳನ್ನು ರೂಪಿಸುವಲ್ಲಿ ಮೂಲ ಆಧಾರವಾಗುತ್ತದೆ. ಜನಗಣತಿಯನ್ನು ಕೈಗೊಳ್ಳದಿದ್ದರೆ ವಿಶ್ವಾಸಾರ್ಹ ಅಂಕಿ-ಅಂಶಗಳ ಕೊರತೆ ಸೃಷ್ಟಿಯಾಗುತ್ತದೆ. 10 ವರ್ಷಗಳಿಗಿಂತ ಹಿಂದಿನ ಅಂಕಿ-ಅಂಶಗಳು ಹೆಚ್ಚು ವಿಶ್ವಾಸಾರ್ಹವಾಗಿ ಉಳಿಯುವುದಿಲ್ಲ. ಇದರಿಂದಾಗಿ ದೇಶದ ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳ ದಕ್ಷತೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದಲ್ಲದೆ, ಪ್ರತಿ 10 ವರ್ಷಗಳ ಅವಧಿಯ ಆವರ್ತನೆಯು ತಪ್ಪಿದರೆ, ಹಲವು ವಿಷಯಗಳಲ್ಲಿ ಹಿಂದಿನ ಅಂಕಿ-ಅಂಶಗಳಿಗೆ ಹೋಲಿಕೆ ಮಾಡಲು ಅನಾನುಕೂಲ ಉಂಟಾಗುತ್ತದೆ.

ಸಂವಿಧಾನಾತ್ಮಕವಾಗಿ ಕಡ್ಡಾಯ

              ಭಾರತದಲ್ಲಿ ಜನಗಣತಿ ಕೈಗೊಳ್ಳುವುದು ಸಂವಿಧಾನಾತ್ಮಕವಾಗಿ ಕಡ್ಡಾಯವಾಗಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆ ಕ್ಷೇತ್ರಗಳ ಪುನರ್​ವಿಂಗಡಣೆ ಹಿನ್ನೆಲೆಯಲ್ಲಿ ಜನಗಣತಿ ಮಾಡಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಜನಗಣತಿಯನ್ನು ಯಾವಾಗ ನಡೆಸಬೇಕು ಅಥವಾ ಈ ಪ್ರಕ್ರಿಯೆಯ ಆವರ್ತನೆ ಎಷ್ಟಿರಬೇಕು ಎಂಬುದನ್ನು ಸಂವಿಧಾನದಲ್ಲಿ ಹೇಳಲಾಗಿಲ್ಲ. 1948ರ ಭಾರತೀಯ ಜನಗಣತಿ ಕಾಯ್ದೆಯು ಜನಗಣತಿ ಕೈಗೊಳ್ಳಲು ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಆದರೆ, ಯಾವಾಗ ಮಾಡಬೇಕೆಂಬುದನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ಮಾಡಲೇಬೇಕೆಂದು ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಬಾಧ್ಯತೆಗಳಿಲ್ಲ.

                ಈ ವರ್ಷ ಜನಗಣತಿಯನ್ನು ಪೂರ್ಣ ಮಾಡದೆಇರುವುದಕ್ಕೆ ಕಾರಣಗಳಿರಬಹುದು. ಆದರೆ, ಅದೇನೆಂದು ನನಗೆ ತಿಳಿದಿಲ್ಲ. ಈ ಪ್ರಕ್ರಿಯೆ ಮಹತ್ವವನ್ನು ಅತಿಯಾಗಿ ಒತ್ತಿಹೇಳುವ ಅಗತ್ಯವಿಲ್ಲ. ನಮ್ಮ ಇತ್ತೀಚಿನ ಸಾಮಾಜಿಕ ಮತ್ತು ಆರ್ಥಿಕ ಅಂಕಿ-ಅಂಶಗಳು ನಾವು ನಿರ್ವಹಿಸಲು ಬಯಸುವ ಗುಣಮಟ್ಟದ್ದಾಗಿಲ್ಲ. ಇದು ಎಲ್ಲೆಡೆ ಪರಿಣಾಮ ಬೀರುತ್ತದೆ.

            2021ರ ಜನಗಣತಿಯ ಬಹುಪಾಲು ಕೆಲಸವು ಕೋವಿಡ್ ಅಪ್ಪಳಿಸುವ ಮೊದಲು ಪೂರ್ಣಗೊಂಡಿದೆ. ಗಣತಿದಾರರಿಂದ ಎಲ್ಲಾ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್​ಗೆ ಫೀಡ್ ಮಾಡುವುದರೊಂದಿಗೆ ಇದು ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯಾಗಿರಲಿದೆ ಎಂದು ಆರಂಭದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೂ 'ಪ್ರಾಯೋಗಿಕ ತೊಂದರೆಗಳ ಕಾರಣ, ನಂತರ ಅದನ್ನು ಮೊಬೈಲ್ ಅಪ್ಲಿಕೇಶನ್ ಹಾಗೂ ಸಾಂಪ್ರದಾಯಿಕ ಕಾಗದದ ರೂಪಗಳನ್ನು ಬಳಸಿಕೊಂಡು 'ಮಿಕ್ಸ್ ಮೋಡ್'ನಲ್ಲಿ ನಡೆಸಲು ನಿರ್ಧರಿಸಲಾಯಿತು. ಏಪ್ರಿಲ್ 1ರಂದು ಮನೆಗಳ ಗಣತಿ ಪ್ರಾರಂಭವಾಗಬೇಕಿರುವ ಸಂದರ್ಭದಲ್ಲಿ 2020ರ ಮಾರ್ಚ್​ನಲ್ಲಿ ಭಾರತದಲ್ಲಿ ಕೋವಿಡ್ ಅಪ್ಪಳಿಸಿತು. ಮನೆ ಗಣತಿ ಪ್ರಾರಂಭವಾಗುವ ಕೇವಲ ಒಂದು ವಾರದ ಮೊದಲು ಲಾಕ್​ಡೌನ್ ವಿಧಿಸಲಾಯಿತು. ಕೋವಿಡ್ ಕಾರಣದಿಂದಾಗಿ 2021ರಲ್ಲಿ ಜನಗಣತಿ ನಡೆಯಲಿಲ್ಲ. ಆದರೆ, 2022ರಲ್ಲಿ ಇಲ್ಲದಿದ್ದರೂ 2023ರಲ್ಲಿಯಾದರೂ ಜನಗಣತಿ ಪ್ರಕ್ರಿಯೆಯನ್ನು ಏಕೆ ಪುನರಾರಂಭಿಸಲಿಲ್ಲ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ಮೂರನೆಯ ಅಲೆಯು ಕ್ಷೀಣಿಸಿದ ನಂತರ 2022ರ ಮಧ್ಯದ ವೇಳೆಗೆ ಬಹುತೇಕ ಚಟುವಟಿಕೆಗಳು ಪುನರಾರಂಭಗೊಂಡು ದೇಶದಲ್ಲಿ ಸಾಮಾನ್ಯ ಸ್ಥಿತಿ ನೆಲೆಸಿತು. ಆದರೂ ಜನಗಣತಿ ಮಾತ್ರ ಆರಂಭವಾಗಲಿಲ್ಲ.

ಹೀಗೆ ಕೈಗೊಳ್ಳಲಾಗುತ್ತದೆ ಸೆನ್ಸಸ್

                ಜನಗಣತಿಯು ಮೂಲಭೂತವಾಗಿ ಎರಡು ಹಂತದ ಪ್ರಕ್ರಿಯೆಯಾಗಿದ್ದು, ಮನೆ ಪಟ್ಟಿ ಮತ್ತು ನಿಜವಾದ ಜನಸಂಖ್ಯೆಯ ಎಣಿಕೆಯನ್ನು ಒಳಗೊಂಡಿರುತ್ತದೆ. ಜನಗಣತಿ ಕೈಗೊಳ್ಳಲಾಗುವ ವರ್ಷದ ಹಿಂದಿನ ವರ್ಷದ ಮಧ್ಯದಲ್ಲಿಯೇ ಮನೆ ಪಟ್ಟಿ ಮಾಡಲಾಗುತ್ತದೆ. ಇದಾದ ನಂತರ ಜನಸಂಖ್ಯೆಯ ಎಣಿಕೆಯು ಜನಗಣತಿ ವರ್ಷದ ಫೆಬ್ರವರಿ ತಿಂಗಳ ಎರಡು ಮೂರು ವಾರಗಳಲ್ಲಿ ನಡೆಯುತ್ತದೆ. ನಂತರ ಮಾರ್ಚ್ 1ರ ಮಧ್ಯರಾತ್ರಿ ಜನಗಣತಿಯ ಅನುಸಾರ ಭಾರತದ ಜನಸಂಖ್ಯೆಯನ್ನು ಪ್ರಕಟಿಸಲಾಗುತ್ತದೆ. ಫೆಬ್ರವರಿಯಲ್ಲಿ ಕೈಗೊಂಡ ಗಣತಿ ಅವಧಿಯಲ್ಲಿ ಸಂಭವಿಸಿರಬಹುದಾದ ಜನನ ಮತ್ತು ಮರಣಗಳನ್ನು ಲೆಕ್ಕಹಾಕಲು ಮತ್ತು ಪರಿಷ್ಕರಣೆಗಳನ್ನು ಕೈಗೊಳ್ಳಲು ಗಣತಿದಾರರು ಮಾರ್ಚ್ ಮೊದಲ ವಾರದಲ್ಲಿ ಮತ್ತೆ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಜನಗಣತಿಯ ಸಿದ್ಧತೆಗಳು ಸಾಮಾನ್ಯವಾಗಿ ಮೂರರಿಂದ ನಾಲ್ಕು ವರ್ಷ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಸಂಪೂರ್ಣ ಅಂಕಿ-ಅಂಶಗಳ ಸಂಕಲನ ಮತ್ತು ಪ್ರಕಟಣೆಯು ಹಲವು ತಿಂಗಳುಗಳಿಂದ ಕೆಲವು ವರ್ಷಗಳವರೆಗೆ ಸಾಗುತ್ತದೆ.

ಲೋಕಸಭೆ ಚುನಾವಣೆ ನಂತರ?

               ಕರೊನಾ ಸಾಂಕ್ರಾಮಿಕ ರೋಗದಿಂದಾಗಿ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಟ್ಟಿದ್ದ ಜನಗಣತಿಯು ಮತ್ತಷ್ಟು ವಿಳಂಬವಾಗಲಿದೆ. 2024ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ಜನಗಣತಿ ನಡೆಯುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಾರ್ಟ್​ಫೋನ್​ಗಳು, ಇಂಟರ್​ನೆಟ್, ಲ್ಯಾಪ್​ಟಾಪ್, ಕಂಪ್ಯೂಟರ್, ಕಾರು, ದ್ವಿಚಕ್ರ ವಾಹನಗಳು, ಸೇವಿಸುವ ಮುಖ್ಯ ಧಾನ್ಯ ಸಹಿತ 31 ಪ್ರಶ್ನೆಗಳನ್ನು ಜನಗಣತಿಯಲ್ಲಿ ಕೇಳಲಾಗುತ್ತದೆ. ಚುನಾವಣಾ ಆಯೋ ಗವು ಮುಂದಿನ ಸಾರ್ವತ್ರಿಕ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮುಂತಾದ ಪ್ರಕ್ರಿಯೆ ಪ್ರಾರಂಭಿಸುತ್ತದೆ. ಅಕ್ಟೋಬರ್​ನಿಂದ ಚುನಾವಣಾ ಆಯೋಗ, ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಈ ಕಾರ್ಯದಲ್ಲಿ ವ್ಯಸ್ತವಾಗುವ ಕಾರಣ ಜನಗಣತಿ ಕಾರ್ಯವನ್ನು ನಡೆಸಲು ಕಡಿಮೆ ಸಮಯಾವಕಾಶವಿದೆ. ಲೋಕಸಭೆ ಚುನಾವಣೆಯ ನಂತರವೇ ಜನಗಣತಿ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಿಜಿಟಲ್ ಜನಗಣತಿ

            ಇದು ಮೊದಲ ಡಿಜಿಟಲ್ ಜನ ಗಣತಿಯಾಗಲಿದೆ. ಜನಗಣತಿ ನಮೂನೆ ಯನ್ನು ಸ್ವಂತವಾಗಿ ಭರ್ತಿ ಮಾಡುವ ಹಕ್ಕನ್ನು ಜನರಿಗೆ ನೀಡಲಾಗುತ್ತದೆ. ಇಂಥ ನಾಗರಿಕರಿಗೆ ಎನ್​ಪಿಆರ್ ಕಡ್ಡಾಯಗೊಳಿಸ ಲಾಗಿದೆ. ಆಧಾರ್ ಅಥವಾ ಮೊಬೈಲ್ ಫೋನ್ ಸಂಖ್ಯೆಯನ್ನು ಕಡ್ಡಾಯವಾಗಿ ಸಂಗ್ರಹಿಸಲಾಗುತ್ತದೆ.

ಯಾವ ಮಾಹಿತಿ ಸಂಗ್ರಹ?

                    ನಾಗರಿಕರು ಮನೆಯಲ್ಲಿ ಯಾವ ಧಾನ್ಯಗಳನ್ನು ಸೇವಿಸುತ್ತಾರೆ, ಕುಡಿಯುವ ನೀರು ಮತ್ತು ಬೆಳಕಿನ ಮುಖ್ಯ ಮೂಲ, ಶೌಚಗೃಹ ಮತ್ತು ಅದರ ಪ್ರಕಾರ, ತ್ಯಾಜ್ಯನೀರಿನ ಹೊರಹರಿವು, ಸ್ನಾನದ ಸೌಲಭ್ಯದ ಲಭ್ಯತೆ, ಅಡುಗೆಮನೆ ಮತ್ತು ಎಲ್​ಪಿಜಿ / ಪಿಎನ್​ಜಿ ಸಂಪರ್ಕದ ಲಭ್ಯತೆ, ಬಳಸುವ ಮುಖ್ಯ ಇಂಧನ ಕುರಿತು ಮಾಹಿತಿ ಕೇಳಲಾಗುತ್ತದೆ. ಮನೆಯ ಮಹಡಿ, ಗೋಡೆ ಮತ್ತು ಛಾವಣಿ, ಅದರ ಸ್ಥಿತಿ, ಮನೆಯಲ್ಲಿ ಸಾಮಾನ್ಯವಾಗಿ ವಾಸಿಸುವ ಒಟ್ಟು ವ್ಯಕ್ತಿಗಳ ಸಂಖ್ಯೆ, ಮನೆಯ ಮುಖ್ಯಸ್ಥ ಮಹಿಳೆಯೇ, ಮನೆಯ ಕೋಣೆಗಳ ಸಂಖ್ಯೆ ಮತ್ತು ಮನೆಯಲ್ಲಿ ವಾಸಿಸುವ ವಿವಾಹಿತ ದಂಪತಿಗಳ ಸಂಖ್ಯೆ ಇನ್ನಿತರ ಮಾಹಿತಿಗಳನ್ನೂ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries