ಮುಂಬೈ: ನಾವು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ನಕಲು ಮಾಡಿ ಉತ್ತೀರ್ಣರಾಗುವುದನ್ನು ಮತ್ತು ಡಿಬಾರ್ ಆಗಿರುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ.
ಇದೀಗ ಇದೇ ರೀತಿಯ ಘಟನೆಯೊಂದು ಮುಂಬೈನಲ್ಲಿ ನಡೆದಿದ್ದು ಸಿನಿಮೀಯ ಶೈಲಿಯಲ್ಲಿ ನಕಲು ಮಾಡಲು ಮುಂದಾದ ನಾಲ್ವರು ಪರೀಕ್ಷಾರ್ಥಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಟೆಕ್ನಾಲಜಿ ಮೂಲಕ ನಕಲು ಯತ್ನ
ಸಂಜಯ್ ದತ್ ನಟಿಸಿದ್ದ ಸೂಪರ್ ಹಿಟ್ ಚಲನಚಿತ್ರ ಮುನ್ನಾಭಾಯಿ MBBS ಸಿನಿಮಾದಲ್ಲಿ ನಾಯಕ ಇಯರ್ ಪೋನ್ಸ್ ಬಳಸಿ ನಕಲು ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ.
ಅದೇ ರೀತಿ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸಿದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಾಲ್ವರು ಯುವಕರು ಟೆಕ್ನಾಲಜಿ ಬಳಸಿ ಆರಕ್ಷಕರ ಅತಿಥಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೆನ್ನಲ್ಲಿ ಸಿಮ್, ಇಯರ್ಬಡ್ಸ್
ಪೊಲೀಸ್ ಆಗಬೇಕೆಂಬ ಹಂಬಲದಲ್ಲಿ ನಾಲ್ವರು ಯುವಕರು ವೈರ್ಲೆಸ್ ಗಿಜ್ಮೋಸ್ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಕಂಡು ಬಂದಿದೆ.
ಅನುಮಾನಗೊಂಡ ಅಧಿಕಾರಿಗಳು ನಾಲ್ವರು ಪರೀಕ್ಷಾರ್ಥಿಗಳನ್ನು ಪರಿಶೀಲನೆ ಮಾಡಿದಾಗ ಪೆನ್ನಲ್ಲಿ ಸಿಮ್ ಹಾಗೂ ಅಭ್ಯರ್ಥಿಗಳು ಬ್ಲೂಟೂತ್ ಇಯರ್ಬಡ್ಗಳನ್ನು ಹಾಕಿಕೊಂಡಿರುವುದು ಕಂಡು ಬಂದಿದೆ.
ಇಕ್ಕಳದಿಂದ ಹೊರ ತೆಗೆದರು
ಪರೀಕ್ಷಾ ಕೇಂದ್ರ ಹೊರಗಡೆ ಅಪರಿಚಿತ ವ್ಯಕ್ತಿ ಓರ್ವ ಇವರಿಗೆ ಪ್ರಶ್ನೆ ಪತ್ರದಲ್ಲಿರುವ ಉತ್ತರಗಳನ್ನು ಅಭ್ಯರ್ಥಿಗಳಿಗೆ ಭೋದಿಸುತ್ತಿದ್ದ. ಪೊಲೀಸರು ಇಕ್ಕಳದ ಸಹಾಯದೊಂದಿಗೆ ಬಂಧಿತ ಆರೋಪಿಗಳ ಕಿವಿಯಿಂದ ಇಯರ್ಬಡ್ಸ್ಗಳನ್ನು ಹೊರ ತೆಗೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರೀಕ್ಷಾರ್ಥಿಗಳಿಗೆ ಉತ್ತರ ಭೋದಿಸುತ್ತಿದ್ದ ಆರೋಪಿಗಾಗಿ ಬಲೆ ಬೀಸಿದ್ದು ಇದರ ಹಿಂದೆ ದೊಡ್ಡ ಗ್ಯಾಂಗ್ನ ಕೈವಾಡ ಇರಬಹುದು ಎಂದು ಶಂಕಿಸಿದ್ದಾರೆ.