ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ರತ್ನಾ ಆಚಾರ್ಯ ಮತ್ತು ಮನೆಯವರಿಂದ ಸೇವಾರೂಪವಾಗಿ “ಶ್ರೀ ರಾಮ ದರ್ಶನ” ಯಕ್ಷಗಾನ ತಾಳಮದ್ದಳೆ ಶನಿವಾರ ಪ್ರಸ್ತುತಗೊಂಡಿತು. ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದ ಮೊದಲಿಗೆ ಕಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಲತಾ ಆಚಾರ್ಯ ಬನಾರಿ ಅವರಿಗೆ ಬೀಳ್ಕೊಡುಗೆ ಸಮಾರಂಭವು ಕಲಾ ಸಂಘದ ವತಿಯಿಂದ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಶುಭ ಹಾರೈಸಿ ಅಭಿನಂದಿಸಿ, ನೂತನ ದಂಪತಿ ಲತಾ ಧನಂಜಯರನ್ನು ಸ್ಮರಣಿಕೆ ಉಡುಗೊರೆ ಸಹಿತ ಸತ್ಕರಿಸಿ ಮಾತನಾಡಿದರು.
ನಿವೃತ್ತ ಅಧ್ಯಾಪಕ ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಡಿ ರಾಮಣ್ಣ ಮಾಸ್ತರ್ ದೇಲಂಪಾಡಿ, ಎಂ. ರಮಾನಂದ ರೈ, ಮಾತನಾಡಿದರು.
ಬಳಿಕ ಸಂಘದ ಕಾರ್ಯದರ್ಶಿ ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮೋಹನ ಮೆಣಸಿನಕಾನ ಮತ್ತು ನಿತೀಶ್ ಕುಮಾರ್ ಎಂಕಣ್ಣಮೂಲೆ ಸಹಕರಿಸಿದರು. ಚೆಂಡೆ ಮದ್ದಳೆಯಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ತಮ್ಮ ಕೈಚಳಕ ತೋರ್ಪಡಿಸಿದರು.
ಅರ್ಥಧಾರಿಗಳಾಗಿ ರಮಾನಂದ ರೈ (ಶ್ರೀ ರಾಮ), ರಾಮಯ್ಯ ರೈ ಕಲ್ಲಡ್ಕ ಗುತ್ತು, (ಶ್ರೀ ಕೃಷ್ಣ), ವೆಂಕಟ್ರಮಣ ಭಟ್ (ಅರ್ಜುನ), ರಾಮಣ್ಣ ಮಾಸ್ತರ್ ದೇಲಂಪಾಡಿ
(ಹನುಮಂತ) ಭಾಗವಹಿಸಿ ತಮ್ಮ ವಾಕ್ಚಾತುರ್ಯದಿಂದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ನಾರಾಯಣ ದೇಲಂಪಾಡಿ,ಪದ್ಮನಾಭ ಗೋಳಿತ್ತಡ್ಕ, ರಾಮನಾಯ್ಕ ದೇಲಂಪಾಡಿ, ಐತ್ತಪ್ಪಗೌಡ ಮುದಿಯಾರು,ಶಿಕ್ಷಕಿ ಚಿತ್ರಕಲಾ ಆಚಾರ್ಯ ಕುಂಬಳೆ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ನಂದಕಿಶೋರ ಬನಾರಿ, ಹಾಗೂ ಸ್ಥಳಿಯ ಪ್ರಮುಖರು ಮತ್ತು ಸಂಘದ ಸದಸ್ಯರು ಸಹಕಾರವನ್ನಿತ್ತು ಯಶಸ್ವಿಗೊಳಿಸಿದರು.