ನವದೆಹಲಿ: 'ದೇಶದ ವೈವಿಧ್ಯತೆ ಮತ್ತು ಜನರ ನಡುವಿನ ಸಂಪರ್ಕವನ್ನು ಪ್ರೋತ್ಸಾಹಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಅನುಷ್ಠಾನಗೊಳಿಸಿರುವ ಯುವ ಸಂಗಮ ಯೋಜನೆ ಮಹತ್ವದ ಹೆಜ್ಜೆಯಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಮನದ ಮಾತು ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಸಂಗಮದ ಮೊದಲ ಹಂತದಡಿ ಈಗಾಗಲೇ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು 22 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿದ್ಯಾರ್ಥಿಗಳು ಭೇಟಿ ನೀಡುವುದರಿಂದ ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆ ಅರಿಯಲು ಸಹಕಾರಿಯಾಗುತ್ತದೆ ಎಂದಿದ್ದಾರೆ.
'ನಿಮ್ಮ ಅನುಭವಗಳನ್ನು ಬ್ಲಾಗ್‌ಗಳಲ್ಲಿ ಬರೆಯುವ ಮೂಲಕ ಇತರರಿಗೂ ಈ ಮಾಹಿತಿ ಹಂಚಿಕೊಳ್ಳಬೇಕು' ಎಂದು ಅವರು ಸಲಹೆ ನೀಡಿದ್ದಾರೆ.
ಕಳೆದ ತಿಂಗಳು ಪೂರ್ಣಗೊಂಡ 100ನೇ ಸಂಚಿಕೆಯನ್ನು ಭಾರತ ಸೇರಿದಂತೆ ವಿಶ್ವದ ಹಲವು ಜನರು ಆಲಿಸಿದ್ದಾರೆ. ಜೊತೆಗೆ, ರಚನಾತ್ಮಕ ವಿಶ್ಲೇಷಣೆ ಕೂಡ ಮಾಡಿದ್ದಾರೆ. ಭಾನುವಾರದ 101ನೇ ಸಂಚಿಕೆಯು ಎರಡನೇ ಸೆಂಚುರಿಯ ಆರಂಭವಾಗಿದೆ' ಎಂದು ಮೋದಿ ತಿಳಿಸಿದ್ದಾರೆ.
ಸಾವರ್ಕರ್ ಬಲಿದಾನ ಇಂದಿಗೂ ಪ್ರೇರಣೆ: ವೀರ ಸಾವರ್ಕರ್ ಅವರ ಬದುಕು ಮತ್ತು ಸಾಧನೆಗಳನ್ನು ಮೋದಿ ಮೆಲುಕು ಹಾಕಿದರು.
'ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ಬಲಿದಾನ, ಧೈರ್ಯ ಹಾಗೂ ದೃಢ ನಿರ್ಧಾರ ಇಂದಿಗೂ ನಮಗೆ ಪ್ರೇರಣೆಯಾಗಿವೆ' ಎಂದು ಬಣ್ಣಿಸಿದರು.
'ಮೇ 28 ಸಾವರ್ಕರ್ ಅವರ ಜನ್ಮ ದಿನ. ಅವರಲ್ಲಿದ್ದ ಧೈರ್ಯ ಹಾಗೂ ಆತ್ಮಗೌರವವು ದಾಸ್ಯದ ಮನಸ್ಥಿತಿಯನ್ನು ಸಹಿಸಲಿಲ್ಲ' ಎಂದರು.
ಸಾವರ್ಕರ್ ಹೋರಾಟ ಸ್ವಾತಂತ್ರ್ಯಕ್ಕಷ್ಟೇ ಸೀಮಿತಗೊಂಡಿರಲಿಲ್ಲ. ಸಾಮಾಜಿಕ ಸಮಾನತೆ ಮತ್ತು ನ್ಯಾಯಕ್ಕಾಗಿ ಅವರು ನಡೆಸಿದ್ದ ಹೋರಾಟವನ್ನು ಇಂದಿಗೂ ಸ್ಮರಿಸುತ್ತೇವೆ ಎಂದರು.
ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ಸಚಿವರು ಮತ್ತು ಸಂಸದರು ಸಂಸತ್‌ನ ಹಳೆಯ ಕಟ್ಟಡದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವರ್ಕರ್ ಅವರಿಗೆ ನಮನ ಸಲ್ಲಿಸಿದರು.