ನವದೆಹಲಿ: ಜಂತರ್‌ಮಂತರ್‌ನಿಂದ ತಮ್ಮನ್ನು ಹೊರಹಾಕಿದ ಪೊಲೀಸರ ವರ್ತನೆಯನ್ನು ಖಂಡಿಸಿರುವ ಕುಸ್ತಿ ಪಟುಗಳು ತಾವು ಕಷ್ಟ ಪಟ್ಟು ಸಂಪಾದಿಸಿರುವ ಪದಕಗಳನ್ನು ಗಂಗಾ ನದಿಗೆ ಎಸೆಯುತ್ತೇವೆ ಎಂದು ಹೇಳಿದ್ದಾರೆ.
ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಹಲವು ಕುಸ್ತಿ ಪಟುಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಕುಸ್ತಿ ಪಟುಗಳು ಇಂದು ಸಂಜೆ 6 ಗಂಟೆಗೆ ಹರಿದ್ವಾರಕ್ಕೆ ತೆರಳಿ ತಮ್ಮ ಪದಕಗಳನ್ನು ಗಂಗಾ ನದಿಗೆ ಹಾಕಲಿದ್ದಾರೆ ಎಂದು 2016ರ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಕುಸ್ತಿ ಪಟು ಸಾಕ್ಷಿ ಮಲಿಕ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಈ ಪದಕಗಳು ನಮ್ಮ ಜೀವ ಮತ್ತು ಆತ್ಮವಾಗಿವೆ. ಅವುಗಳನ್ನು ನಾವು ಗಂಗಾ ನದಿಗೆ ಎಸೆಯಲಿದ್ದೇವೆ. ಅದಾದ ಬಳಿಕ, ಬದುಕುವ ಪ್ರಶ್ನೆಯೇ ಇಲ್ಲ. ಸಾಯುವವರೆಗೂ ಇಂಡಿಯಾ ಗೇಟ್ ಬಳಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ' ಎಂದು ಹಿಂದಿಯಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ಕುಸ್ತಿ ಪಟು ವಿನೇಶ್ ಫೊಗಟ್ ಸಹ ಇದೇ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದ ಆರೋಪದ ಮೇಲೆ ಭಾನುವಾರ ಜಂತರ್‌ಮಂತರ್‌ನ ಪ್ರತಿಭಟನಾ ಸ್ಥಳದಿಂದ ಸಾಕ್ಷಿ ಮಲಿಕ್, ವಿನೇಶ್ ಫೊಗಟ್ ಮತ್ತು ಬಜರಂಗ್ ಪೂನಿಯಾ ಅವರನ್ನು ವಶಕ್ಕೆ ಪಡೆದಿದ್ದ ದೆಹಲಿ ಪೊಲೀಸರು, ಎಫ್‌ಐಆರ್ ದಾಖಲಿಸಿದ್ದರು.
ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತ ಆಟಗಾರರನ್ನು ಪೊಲೀಸರು ಎಳೆದೊಯ್ದ ಪ್ರಸಂಗಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನೂತನ ಸಂಸತ್ ಭವನದ ಎದುರು 'ಮಹಿಳಾ ಮಹಾಪಂಚಾಯತ್' ನಡೆಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲು ಉದ್ದೇಶಿಸಿದ್ದ ಕುಸ್ತಿ ಪಟುಗಳು, ಭದ್ರತೆ ಉಲ್ಲಂಘಿಸಿ ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದರು.