ಗೊಂಡಾ: ಉತ್ತರ ಪ್ರದೇಶದ ಗೊಂಡಾದಲ್ಲಿ ವಕೀಲರೊಬ್ಬರು ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದು, ಆರು ಪೊಲೀಸ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂವರನ್ನು ಅಮಾನತುಗೊಳಿಸಲಾಗಿದೆ.
ವಕೀಲ ರಾಜ್‌ಕುಮಾರ್ ಲಾಲ್ ಶ್ರೀವಾಸ್ತವ (60) ಅವರು 2018 ರಲ್ಲಿ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು.
ಕಳೆದ ವಾರ ಶ್ರೀವಾಸ್ತವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು.
ಮೃತ ವಕೀಲನ ಸಹೋದರ ಪವನ್ ಕುಮಾರ್ ಶ್ರೀವಾಸ್ತವ್ ಪ್ರಕರಣ ದಾಖಲಿಸಿದ್ದು, ರಾಜಿಯಾಗುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪವನ್ ಕುಮಾರ್ ದೂರಿನ ಮೇರೆಗೆ ಆರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ತಿಳಿಸಿದ್ದಾರೆ.