ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಗುರುವಾರ ಹಾಸ್ಟೆಲ್ ಮುಂಭಾಗ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನೋಟಿಸ್ ನೀಡಿರುವ ಹಾಸ್ಟೆಲ್ ಮುಖ್ಯಸ್ಥ ಕೆ.ಪಿ. ಸಿಂಗ್ ಅವರ ಪ್ರತಿಕೃತಿ ದಹಿಸಿ ಘೋಷಣೆ ಕೂಗಿದರು. ಕೂಡಲೇ, ನೋಟಿಸ್ ವಾಪಸ್ ಪಡೆಯಬೇಕು. ಇಲ್ಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಾಗ್ಗೆ ಕಾಲೇಜು ಹಾಸ್ಟೆಲ್‌ಗಳಿಗೆ ಭೇಟಿ ನೀಡುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಊಟ ಮಾಡುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಮೇಲೆ ಮನ್ ಕಿ ಬಾತ್ ಸೇರಿದಂತೆ ಹಲವು ಅನುಪಯುಕ್ತ ಕಾರ್ಯಕ್ರಮಗಳನ್ನು ಹೇರುತ್ತಿದೆ. ಆಗ ಭದ್ರತೆಯ ವಿಷಯ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.
ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್ ಚುಗ್ ಮಾತನಾಡಿ, 'ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಹೊರಗಿನವರು ಭೇಟಿ ನೀಡಿ ಊಟ ಸೇವಿಸಬಹುದು. ರಾಹುಲ್ ಗಾಂಧಿ ಅವರು ವಿ.ವಿಯ ಹಳೆಯ ವಿದ್ಯಾರ್ಥಿ. ವಿದ್ಯಾರ್ಥಿಗಳ ಕರೆಯ ಮೇರೆಗೆ ಅವರು ಹೋಗಿದ್ದಾರೆ. ವಿಶ್ವವಿದ್ಯಾಲಯವು ಬಿಜೆಪಿಯ ಸ್ವತ್ತಲ್ಲ. ನೋಟಿಸ್ ವಾಪಸ್ ಪಡೆಯದಿದ್ದರೆ ರಸ್ತೆಗಿಳಿದು ಹೋರಾಡುತ್ತೇವೆ' ಎಂದು ಹೇಳಿದರು.
ಕಳೆದ ವಾರ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದ್ದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಟ್ಟಿಗೆ ಊಟ ಮಾಡಿ ಸಂವಾದ ನಡೆಸಿದ್ದರು. ಇದು ಹಾಸ್ಟೆಲ್‌ನ ಮಾಹಿತಿ ಹಾಗೂ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ನಿಯಮಾವಳಿ ಅನ್ವಯ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆಯುವ ಶೈಕ್ಷಣಿಕ ಹಾಗೂ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಚಟುಚಟಿಕೆಗಳಲ್ಲಿ ಮಾತ್ರವಷ್ಟೇ ಹೊರಗಿನ ವ್ಯಕ್ತಿಗಳು ಭಾಗವಹಿಸಬಹುದು. ಇದರ ಹೊರತಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಿಷಿದ್ಧ ಎಂದು ತಿಳಿಸಲಾಗಿದೆ.
ರಾಷ್ಟ್ರೀಯ ಪಕ್ಷವೊಂದರ ನಾಯಕ ಹಾಗೂ ಝಡ್ ಪ್ಲಸ್ ಭದ್ರತೆ ಹೊಂದಿರುವ ವ್ಯಕ್ತಿಯು ನಿಯಮಾವಳಿ ಮೀರಿ ಹಾಸ್ಟೆಲ್ ಪ್ರವೇಶಿಸಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.