ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ವಿರೋಧ ಪಕ್ಷಗಳ ವತಿಯಿಂದ ಒಬ್ಬ ಹುರಿಯಾಳನ್ನು ಮಾತ್ರ ಕಣಕ್ಕಿಳಿಸಬೇಕು ಎಂಬ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಹಾಗೂ ಇತರ ಪಕ್ಷಗಳ ಪ್ರಸ್ತಾವಕ್ಕೆ ಸಿಪಿಎಂ ಸಹಮತ ವ್ಯಕ್ತಪಡಿಸಿಲ್ಲ.
ಶನಿವಾರ ಮುಕ್ತಾಯವಾದ ಸಿಪಿಎಂನ ಕೇಂದ್ರೀಯ ಸಮಿತಿಯ ಮೂರು ದಿನಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಪಕ್ಷವು ಭಾನುವಾರ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಸಭೆಯಲ್ಲಿ ಚರ್ಚೆಯಾದ ವಿಷಯಗಳ ಮಾಹಿತಿ ನೀಡಿದೆ.
'ಬಿಜೆಪಿಯನ್ನು ಸೋಲಿಸುವುದು ನಮ್ಮ ಮುಖ್ಯ ಗುರಿ. ಈ ಗುರಿ ಸಾಧನೆಗಾಗಿ ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ವಿಪಕ್ಷಗಳಿಗೆ ಸಹಕಾರ ನೀಡಲು ಹಾಗೂ ಅವುಗಳೊಂದಿಗೆ ಕೆಲಸ ಮಾಡಲು ಪಕ್ಷ ಸಿದ್ಧವಿದೆ' ಎಂದು ಸಿಪಿಎಂ ತಿಳಿಸಿದೆ.
'ಆಯಾ ರಾಜ್ಯಗಳಲ್ಲಿನ ಸನ್ನಿವೇಶಗಳನ್ನು ಅವಲೋಕಿಸಿದ ನಂತರ, ಬಿಜೆಪಿ ವಿರೋಧಿ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆ ಆಗುವಂತೆ ಮಾಡಬೇಕು' ಎಂದು ಸಿಪಿಎಂ ಪ್ರತಿಪಾದಿಸಿದೆ. ಆ ಮೂಲಕ, ಬಿಜೆಪಿ ವಿರುದ್ಧ ವಿಪಕ್ಷಗಳ ಪಾಳೆಯದಿಂದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಒಪ್ಪಿಗೆ ಇಲ್ಲ ಎಂಬ ಸಂದೇಶವನ್ನು ರವಾನಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
'ಕೋಮು ಧ್ರುವೀಕರಣ ಹೆಚ್ಚುತ್ತಿರುವುದು, ದ್ವೇಷಣ ಭಾಷಣ ಹಾಗೂ ಹಿಂಸಾಚಾರ, ಅದಾನಿ ಸಮೂಹದ ಹಗರಣ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ, ಜಾತಿ ಗಣತಿಯ ಅವಶ್ಯಕತೆ ಹಾಗೂ ಒಕ್ಕೂಟ ವ್ಯವಸ್ಥೆ ಮೇಲಿನ ಪ್ರಹಾರದಂತಹ ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಜನರಿಗೆ ಮನದಟ್ಟು ಮಾಡಲು ವಿರೋಧ ಪಕ್ಷಗಳು ಒಗ್ಗೂಡುವುದು ಅಗತ್ಯ' ಎಂಬ ತನ್ನ ನಿಲುವನ್ನು ಪಕ್ಷ ಸ್ಪಷ್ಟಪಡಿಸಿದೆ.
'ಪ್ರತಿ ರಾಜ್ಯದ ರಾಜಕೀಯ ಸನ್ನಿವೇಶ ಭಿನ್ನವಾಗಿದೆ. ರಾಜ್ಯವೊಂದರಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೀಗಿರುವಾಗ, ಎಲ್ಲ ರಾಜ್ಯಗಳಿಗೂ ಸರಿಹೊಂದುವಂತಹ ಸನ್ನಿವೇಶವನ್ನು ವಿರೋಧ ಪಕ್ಷಗಳು ಹೇಗೆ ಸೃಷ್ಟಿಸುತ್ತವೆ' ಎಂಬ ಪ್ರಶ್ನೆಯನ್ನೂ ಪಕ್ಷದ ಮುಖಂಡರು ಎತ್ತಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ಸಿಪಿಎಂಗೆ ಒಲವು ಇಲ್ಲ ಎಂದು ಮೂಲಗಳು ಹೇಳಿವೆ.
'ಚುನಾವಣಾ ಪೂರ್ವ ಮೈತ್ರಿಯು ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರ ಸಂಖ್ಯೆ ಹೆಚ್ಚಳಕ್ಕೆ ನೆರವಾಗುವುದಿಲ್ಲ. ಬಿಜೆಪಿ ವಿರುದ್ಧ ವಿಪಕ್ಷಗಳ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಿ ನೇರ ಹಣಾಹಣಿಯಾಗುಂತೆ ಮಾಡಿದರೆ, ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿಗೆ ಅವಕಾಶ ಒದಗಿಸಿದಂತಾಗುತ್ತದೆ ಎಂಬ ಆತಂಕವನ್ನು ಪಕ್ಷ ವ್ಯಕ್ತಪಡಿಸಿದೆ' ಎಂದು ಇವೇ ಮೂಲಗಳು ಹೇಳಿವೆ.