ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂಸಾಚಾರಪೀಡಿತ ಮಣಿಪುರವನ್ನು ಸೋಮವಾರ ತಲುಪಿದ್ದಾರೆ. ಅವರು ನಾಲ್ಕು ದಿನಗಳ ತಮ್ಮ ಭೇಟಿಯ ವೇಳೆ ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕನ ಮತ್ತು ಶಾಂತಿ ಪುನರ್‌ಸ್ಥಾಪನೆಗಾಗಿ ಹಲವು ಸುತ್ತಿನ ಭದ್ರತಾ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇ 3ರಂದು ಪ್ರತಿಭಟನಾ ಮೆರವಣಿಗೆಯಲ್ಲಿ ಮೈತೇಯಿ ಮತ್ತು ಕೂಕಿ ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ ಮತ್ತು ಹಿಂಸಾಚಾರ ನಡೆದಿತ್ತು. ಬಳಿಕವೂ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಗೃಹ ಸಚಿವರು ಜೂನ್ 1ರವರೆಗೆ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪರಿಸ್ಥಿತಿ ಅವಲೋಕನದ ಜತೆಗೆ ಅಲ್ಲಿನ ಜನಜೀವನವನ್ನು ಸಹಜಸ್ಥಿತಿಗೆ ತರುವ ಸಲುವಾಗಿ ಹಲವು ಸುತ್ತಿನ ಭದ್ರತಾ ಸಭೆಗಳನ್ನೂ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರು ಸಮಾಜದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಮೈತೇಯಿ ಮತ್ತು ಕೂಕಿ ಸಮುದಾಯಗಳ ವಿವಿಧ ಗುಂಪುಗಳ ಪ್ರತಿನಿಧಿಗಳನ್ನು ಭೇಟಿಯಾಗುವ ನಿರೀಕ್ಷೆಯಿದೆ.
ಸೇನೆ- ಬಂಡುಕೋರರ ಮಧ್ಯೆ ಗುಂಡಿನ ಚಕಮಕಿ:
ಸಂಘರ್ಷ ಪೀಡಿತ ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಭದ್ರತಾ ಪಡೆ ಮತ್ತು ಕೂಕಿ ಬಂಡುಕೋರರ ನಡುವಿನ ಗುಂಡಿನ ಚಕಮಕಿಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದು, ಮೃತ ಬಂಡುಕೋರರ ಸಂಖ್ಯೆ ಐದಕ್ಕೆ ಏರಿದೆ. ಭಾನುವಾರ ಇಬ್ಬರು ಮೃತಪಟ್ಟಿದ್ದು, ಗುಂಡೇಟುಗಳಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿಯಲ್ಲಿ ಸೋಮವಾರ ಮೂವರು ಮೃತಪಟ್ಟಿದ್ದಾರೆ.
ಸೇನೆ ಮತ್ತು ಅರೆಸೇನಾ ಪಡೆ ಯೋಧರು ಇಂಫಾಲ್ ಕಣಿವೆ ಪ್ರದೇಶ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಬಂಡುಕೋರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಡುಕೋರರಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಭದ್ರತಾ ಪಡೆಗಳು ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿವೆ. ಶುಗನುವಿನಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಇತ್ತೀಚಿನ ಹಿಂಸಾಚಾರ ಘಟನೆಗಳು ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ 11 ಗಂಟೆಗಳ ಕರ್ಫ್ಯೂ ಸಡಿಲಿಕೆ ಅವಧಿಯನ್ನು ಜಿಲ್ಲಾ ಅಧಿಕಾರಿಗಳು ಕೇವಲ ಆರೂವರೆ ತಾಸುಗಳ ಅವಧಿಗೆ ಕಡಿತಗೊಳಿಸುವಂತೆ ಮಾಡಿವೆ.
40 ಬಂಡುಕೋರರ ಹತ್ಯೆ:
ನಾಗರಿಕರ ಮೇಲೆ ಗುಂಡು ಹಾರಿಸಿ ಮತ್ತು ಅವರ ಮನೆಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದವರಲ್ಲಿ ಸುಮಾರು 40 ಮಂದಿ ಶಸ್ತ್ರಸಜ್ಜಿತ ಬಂಡುಕೋರರು, ಭದ್ರತಾ ಪಡೆಗಳು ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ.
ಶಾಂತಿ ಸ್ಥಾಪಿಸಲು ಕಾರ್ಯಾಚರಣೆಗೆ ಇಳಿದಿರುವ ಭದ್ರತಾ ಪಡೆಗಳೊಂದಿಗೆ ಕೂಕಿ ಬಂಡುಕೋರರು ಶಸ್ತ್ರಾಸ್ತ್ರ ಸಂಘರ್ಷ ನಡೆಸಿದ್ದಾರೆ. ಬಂಡುಕೋರರು ಎಕೆ- 47 ಬಂದೂಕುಗಳು, ಎಂ-16 ಮತ್ತು ಸ್ನೈಪರ್ ರೈಫಲ್‌ಗಳಿಂದ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣಗಳೂ ವರದಿಯಾಗಿವೆ. ಈ ಬಂಡುಕೋರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.