ನವದೆಹಲಿ: ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಬಗ್ಗೆ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
'ಅಗತ್ಯವಿಲ್ಲದಿದ್ದರೂ, ಹಣವನ್ನು ಸಂಪಾದಿಸುವ ಮಾರ್ಗವಾಗಿ ಇಂತಹ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ' ಎಂದು ಈಚೆಗೆ ಸುಪ್ರಿಂ ಕೋರ್ಟ್‌ಗೆ ದೂರು ಸಲ್ಲಿಕೆಯಾದ ಹಿಂದೆಯೇ ಕೇಂದ್ರ ಸರ್ಕಾರ ಈ ಬಗ್ಗೆ ಸೂಚನೆ ನೀಡಿದೆ.
ಅನಗತ್ಯವಾಗಿ ಶಸ್ತ್ರಚಿಕಿತ್ಸೆ ನಡೆಸುವುದನ್ನು ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, ರಾಜ್ಯಗಳಿಂದಲೂ ಈ ಕುರಿತು ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಿಸಿ ಸಲ್ಲಿಸಲಾಗುವುದು ಎಂದು ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿತ್ತು.
'ಎಲ್ಲ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಡೆದಿರುವ ಗರ್ಭಕೋಶ ಶಸ್ತ್ರಚಿಕಿತ್ಸೆ ಕುರಿತಂತೆ ಲೆಕ್ಕಪರಿಶೋಧನೆ ನಡೆಸಬೇಕು. ಅಂಕಿ-ಅಂಶದ ವಿವರ ಸಲ್ಲಿಸಬೇಕು' ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
2019-21ರಲ್ಲಿ ನಡೆಸಿದ್ದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, 15 ರಿಂದ 49 ವರ್ಷದವರಲ್ಲಿ ಶೇ 3ರಷ್ಟು ಮಹಿಳೆಯರು ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇಂಥ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ವಯೋಮಿತಿ 33 ರಿಂದ 37 ವರ್ಷಗಳಾಗಿವೆ.
ಅಭಿವೃದ್ಧಿ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಯನ್ನು 45 ವರ್ಷ ಮೀರಿದ ಮಹಿಳೆಯರಿಗೆ ನಡೆಸಲಾಗುತ್ತದೆ. ಅಲ್ಲದೆ, ಸ್ವತಂತ್ರ ಸಮೀಕ್ಷೆ ಪ್ರಕಾರವೂ ಭಾರತದಲ್ಲಿ 28-36 ವರ್ಷದ ಮಹಿಳೆಯರು ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಹೆಚ್ಚುತ್ತಿದೆ.
ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯೇ ಸಾಕು ಎಂಬ ಪ್ರಕರಣಗಳಲ್ಲೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಬಡವರು, ಅವಿದ್ಯಾವಂತರು, ಮುಖ್ಯವಾಗಿ ಗ್ರಾಮೀಣ ಮಹಿಳೆಯರು ಇಂತಹ ಅನಗತ್ಯ ಶಸ್ತ್ರಚಿಕಿತ್ಸೆಗಳ 'ಬಲಿಪಶು'ಗಳಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅನ್ವಯ ಮಾರ್ಚ್ 16ರವರೆಗೆ ಗರ್ಭಕೋಶ ಶಸ್ತ್ರಚಿಕಿತ್ಸೆಗಾಗಿ 45,434 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಯೋಜನೆಯ ಪ್ರಕಾರ, 40 ವರ್ಷಕ್ಕಿಂತ ಕೆಳಗಿನವರಿಗೆ ಇಂತಹ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾದರೆ, ಅಂತಹ ಚಿಕಿತ್ಸೆಯು ಅಗತ್ಯವಾಗಿದೆ ಎಂದು ಕನಿಷ್ಠ ಇಬ್ಬರು ವೈದ್ಯರು ಪ್ರಮಾಣೀಕರಿಸಬೇಕಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ 2013ರಲ್ಲಿ ಆದೇಶಿಸಿದ್ದ ಸುಪ್ರೀಂ ಕೋರ್ಟ್, ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ಶಿಸ್ತುಕ್ರಮ ವಹಿಸಬೇಕು ಎಂದು ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಿಸಲಿದ್ದು, ಬಳಿಕ ವಸ್ತುಸ್ಥಿತಿ ಪರಿಶೀಲಿಸಲು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲಾಗುವುದು ಎಂದು ಭರವಸೆ ನೀಡಿತ್ತು.
ಈ ಸಂಬಂಧ ಪಿಐಎಲ್ ಅನ್ನು ಸಲ್ಲಿಸಿದ್ದ ಪ್ರಯಾಸ್ ಸಂಸ್ಥೆಯ ಸಂಯೋಜಕ ನರೇಂದ್ರ ಗುಪ್ತಾ ಅವರ ಪ್ರಕಾರ, 'ಮೂರು ವಾರಗಳ ಹಿಂದಷ್ಟೇ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕರ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಆದರೆ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಸಮಿತಿಗಳು ಇನ್ನೂ ರಚನೆಯಾಗಿಲ್ಲ'.
ಇಂಥ ಅನಗತ್ಯ ಶಸ್ತ್ರಚಿಕಿತ್ಸೆಗಳ ಕುರಿತು ಕ್ರಮವಹಿಸಬೇಕು ಎಂದು ಕೋರಿ ಭೂಷಣ್ ಎಂಬವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಪತ್ರ ಬರೆದಿದ್ದರು. 40 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಹಿಳೆಯರ ಮೇಲೆ ನಡೆದಿರುವ ಶಸ್ತ್ರಚಿಕಿತ್ಸೆಗಳ ಪರಿಶೀಲನೆ ನಡೆಸಬೇಕು ಹಾಗೂ ಈ ಕುರಿತಂತೆ ಆರೋಗ್ಯ ಸಚಿವಾಲಯ ರೂಪಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ.