ಇಂಫಾಲ್ : ಘರ್ಷಣೆ, ಹಿಂಸಾಚಾರದ ಘಟನೆ ಗಳಿಂದಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿಯು ಮೂಡಿದ್ದು, ಘರ್ಷಣೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಬಾಧಿತ ಜಿಲ್ಲೆಗಳಲ್ಲಿ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ತುಕಡಿಗಳನ್ನು ನಿಯೋಜಿಸಲಾಗಿದೆ. 'ಕಂಡಲ್ಲಿ ಗುಂಡು' ಆದೇಶವನ್ನು ನೀಡಲಾಗಿದೆ.
ಬುಡಕಟ್ಟುಯೇತರ ಮೈತೇಯಿ ಸಮುದಾಯವು ಹೆಚ್ಚಿರುವ ಇಂಫಾಲ್ ಪಶ್ಚಿಮ, ಕಾಕ್‌ಚಿಂಗ್, ಥೌಬಾಲ್, ಜಿರಿಬಾಮ್, ಬಿಷ್ಣುಪುರ ಜಿಲ್ಲೆಗಳು, ಬುಡಕಟ್ಟು ಜನರು ಹೆಚ್ಚಿರುವ ಚುರ್ಚಾಂದ್‌ಪುರ, ಕಾಂಗ್‌ಪೊಕ್ಪಿ, ತೆಂಗ್‌ನೌಪಾಲ್ ಜಿಲ್ಲೆಗಳಲ್ಲಿ ಕರ್ಫ್ಯೂ ಅನ್ನು ಜಾರಿಗೊಳಿಸಲಾಗಿದೆ.
'ಆರು ಮಂದಿ ಮೃತಪಟ್ಟಿದ್ದಾರೆ. ಕರ್ಫ್ಯೂ ಜಾರಿಗೊಳಿಸಲಾಗಿದೆ. ಸದ್ಯ ಉದ್ವಿಗ್ನ ಸ್ಥಿತಿ ಇದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಸಚಿವ ಅವಾಂಗ್‌ಬೌ ನ್ಯೂಮೈ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಗಲಭೆಪೀಡಿತ ಚುರ್ಚಾಂದ್ ಪುರ್‌ನಿಂದ 5,000, ಇಂಫಾಲ್ ಕಣಿವೆಯಿಂದ 2,000 ಮತ್ತು ಗಡಿಯ ಪಟ್ಟಣ ಮೊರೆಹ್‌ನಿಂದ 2,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜನರಿಗೆ ರಕ್ಷಣೆಯ ಭರವಸೆ ನೀಡಲು ಸೇನೆಯ ತುಕಡಿಗಳು ವಿವಿಧೆಡೆ ಪಥಸಂಚಲನವನ್ನು ನಡೆಸಿವೆ ಎಂದು ತಿಳಿಸಿದರು.
ಶಾ ಚರ್ಚೆ
ಮಣಿಪುರ, ನೆರೆಯ ನಾಗಾಲ್ಯಾಂಡ್ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಚರ್ಚಿಸಿ, ವಿವರ ಪಡೆದರು. ಮಣಿಪುರ ಮುಖ್ಯ ಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಪಿಯು ರಿಯೊ ಅವರು ವಸ್ತುಸ್ಥಿತಿ ವಿವರಿಸಿದರು.
ಹಿಂಸಾಚಾರ ಬಾಧಿತ ಪ್ರದೇಶ ಗಳಿಂದ 9,000 ಜನರನ್ನು ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ
ದ್ದಾರೆ. ಚುರ್ಚಾಂದಪುರ್, ಟೆನು ಗೋಪಾಲ್ ಜಿಲ್ಲೆಯ ಮೊರೆಹ್‌ನಲ್ಲಿ ಹಿಂಸೆ ತೀವ್ರಗೊಂಡಿತ್ತು.
ಇಂಟರ್‌ನೆಟ್ ಸ್ಥಗಿತ: ರಾಜ್ಯದಾದ್ಯಂತ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದೆ. ಭಯಬೀತ 500 ನಿವಾಸಿಗಳು ಇಂಫಾಲ್ ಪಶ್ಚಿಮದ ಲಂಗೋಲ್ ವಲಯದಿಂದ ಮನೆಗಳಿಂದ ಓಡಿದ್ದು, ಪ್ರಸ್ತುತ ಲಾಂಫೆಲ್‌ಪಾಟ್‌ನಲ್ಲಿ ಸಿಆರ್‌ಪಿಎಫ್ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.
ಇಂಫಾಲ್ ಕಣಿವೆಯಲ್ಲಿ ಕುಕಿ ಬುಡಕಟ್ಟು ಸಮುದಾಯವರ ಮನೆಗಳನ್ನು ಗುರಿಯಾಗಿಸಿ ದಾಂದಲೆ ನಡೆಸಲಾಗಿದೆ. ಮೋಟ್‌ಬಂಗ್‌ನಲ್ಲಿ 20 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಕಾರಣ ಏನು?
ರಾಜ್ಯದಲ್ಲಿ ಸುಮಾರು ಶೇ 53ರಷ್ಟಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇತ್ತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳಲ್ಲಿ ಶಿಫಾರಸು ಕಳುಹಿ ಸುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಇತ್ತೀಚೆಗೆ ಸೂಚಿಸಿತ್ತು.
ಆದರೆ, ಶೇ 40ರಷ್ಟಿರುವ ಬುಡಕಟ್ಟು ಸಮುದಾಯಗಳಿಂದ ಈ ಬೇಡಿಕೆಗೆ ತೀವ್ರ ಆಕ್ಷೇಪವಿತ್ತು. ಅಖಿಲ ಭಾರತ ಮಣಿಪುರ ವಿದ್ಯಾರ್ಥಿ ಸಂಘಟನೆ (ಎಟಿಎಸ್‌ಯುಎಂ) ನೇತೃತ್ವದಲ್ಲಿ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯದವರು ಪ್ರತಿಭಟನೆ ಹಾಗೂ 'ಬುಡಕಟ್ಟು ಜನರ ಏಕತಾ ಜಾಥಾ'ವನ್ನು ಬುಧವಾರ ಆಯೋಜಿಸಿದ್ದರು.
ಜಾಥಾ ನಡೆಯುವಾಗಲೇ ಚುರ್ಚಾಂದ್‌ಪುರ ಜಿಲ್ಲೆಯ ತೊರ್ಬುಂಗ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಮೈತೇಯಿ ಸಮುದಾಯಕ್ಕೆ ಸೇರಿದ ಕೆಲವರ ಮೇಲೆ ಹಲ್ಲೆ ನಡೆಸಿತ್ತು. ಇದು ದ್ವೇಷದ ಕಿಡಿಯನ್ನು ಹೊತ್ತಿಸಿತು. ಇದಕ್ಕೆ ಪ್ರತೀಕಾರವಾಗಿ ಎಂಟು ಜಿಲ್ಲೆಗಳಲ್ಲಿ ಹಲ್ಲೆ ಘಟನೆಗಳು
ನಡೆದವು.
ಹಿಂಸೆ ಹೆಚ್ಚಿದಂತೆ ಸೇನೆ, ಅಸ್ಸಾಂ ರೈಫಲ್‌ಗೆ ಸೇರಿದ ಹಲವು ತುಕಡಿಗಳನ್ನು ರಾತ್ರಿಯೇ ಕರೆಸಿಕೊಳ್ಳಲಾಯಿತು. ಸೇನೆ, ಅಸ್ಸಾಂ ರೈಫಲ್ ತುಕಡಿಗಳ ನಿಯೋಜನೆಯಾದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.
ಶಾಂತಿ ಕಾಯ್ದುಕೊಳ್ಳಲು ಸಿ.ಎಂ ಮನವಿ
ಹಿಂಸಾತ್ಮಕ ಘಟನೆಗಳು ದುರದೃಷ್ಟಕರ. ಹಲವರ ಆಸ್ತಿಗಳಿಗೆ ಹಾನಿಯಾಗಿದೆ. ಜನತೆ ಶಾಂತಿ ಕಾಯ್ದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮನವಿ ಮಾಡಿದ್ದಾರೆ.
'ಜನರಲ್ಲಿನ ತಪ್ಪುಗ್ರಹಿಕೆ ಹಿಂಸೆಗೆ ಕಾರಣ. ಕಾನೂನು ರಕ್ಷಣೆ, ಭದ್ರತೆಗೆ ಒತ್ತು ನೀಡಿದ್ದು, ಗಲಭೆ ನಿರತರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ' ಎಂದು ತಿಳಿಸಿದ್ದಾರೆ.
'ಬಿಜೆಪಿಯ ದ್ವೇಷ ರಾಜಕಾರಣ ಕಾರಣ'
'ಮಣಿಪುರ ಹೊತ್ತಿ ಉರಿಯುತ್ತಿದೆ. ಹಿಂಸೆಗೆ ಬಿಜೆಪಿಯ ದ್ವೇಷ ರಾಜಕಾರಣವೇ ಕಾರಣ. ಶಾಂತಿ ಸ್ಥಾಪಿಸಲು ಪ್ರಧಾನಿ ಒತ್ತು ನೀಡಬೇಕು' ಎಂದು ಕಾಂಗ್ರೆಸ್ ಪಕ್ಷ ಆಗ್ರಹಪಡಿಸಿದೆ.
'ಬಿಜೆಪಿಯು ಸಮುದಾಯಗಳ ನಡುವೆ ಬಿರುಕು ಮೂಡಿಸುತ್ತಿದೆ. ಬಿಜೆಪಿಯ ಅಧಿಕಾರ ಲಾಲಸೆ, ದ್ವೇಷ ರಾಜಕಾರಣ ಈ ಗೊಂದಲಕ್ಕೆ ಕಾರಣ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ ರಕ್ಷಣೆಗೆ ಜನರು ಆದ್ಯತೆ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.
ಪಕ್ಷದ ನಾಯಕ ರಾಹುಲ್‌ಗಾಂಧಿ ಅವರೂ ಟ್ವೀಟ್ ಮಾಡಿದ್ದು, ಜನರು ಶಾಂತಿ ಕಾಯ್ದುಕೊಳ್ಳಬೇಕು. ಸಹಜ ಸ್ಥಿತಿ ಸ್ಥಾಪಿಸಲು ಪ್ರಧಾನಿ ಒತ್ತು ನೀಡಬೇಕು ಎಂದು ಮನವಿ ಮಾಡಿದ್ದಾರೆ.
'ರಾಜ್ಯ ಉರಿಯುತ್ತಿದೆ, ಸಹಾಯ ಮಾಡಿ'
ಬಾಕ್ಸಿಂಗ್ ಪಟು ಎಂ.ಸಿ.ಮೇರಿ ಕೋಮ್ ಅವರೂ ರಾಜ್ಯದಲ್ಲಿ ಶಾಂತಿ ರಕ್ಷಣೆಗೆ ಮನವಿ ಮಾಡಿದ್ದಾರೆ. 'ನನ್ನ ರಾಜ್ಯ ಉರಿಯುತ್ತಿದೆ, ಸಹಾಯ ಮಾಡಿ' ಎಂದು ಕೋರಿದ್ದಾರೆ.
ಈ ಕುರಿತ ಟ್ವೀಟ್ ಅನ್ನು ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ , ಪಶ್ಚಿಮ ಬಂಗಾಳ ಮುಖ್ಯಮಂತ್ರಿಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಕ್ರಮವಹಿಸಲಿ. ಇಂದು, ನಾವು ಮನುಷ್ಯತ್ವವನ್ನು ಸುಟ್ಟುಹಾಕಿದರೆ, ನಾಳೆ ನಾವು ಮನುಷ್ಯರಾಗಿ ಉಳಿಯುವುದಿಲ್ಲ.