ಮಕ್ಕಳನ್ನು ಗುಣವಂತರಾಗಿ ಬೆಳೆಸುವುದು ಬಹಳ ಅಗತ್ಯ. ಇದರ ಜವಾಬ್ದಾರಿ ಸಂಪೂರ್ಣ ತಂದೆ ತಾಯಿಯ ಮೇಲೆಯೇ ಇರುತ್ತದೆ. ಯಾವುದನ್ನು ಮಾಡಬೇಕು ಯಾವ ವರ್ತನೆ ಸರಿ ಅಲ್ಲ ಎನ್ನುವುದು ಮಕ್ಕಳಿಗೆ ಹೇಳಿಕೊಡುವ ಹೊಣೆ ತಂದೆ ತಾಯಿಯದ್ದು. ಸಮಾಜ ಕೂಡ ಅಸಭ್ಯ ವರ್ತನೆ ತೋರಿದ ಮಕ್ಕಳ ತಂದೆ ತಾಯಿಯ ಮೇಲೆಯೇ ಇದರ ಜವಾಬ್ದಾರಿ ಹೊರಿಸುತ್ತದೆ.
ಮಕ್ಕಳಿಗೆ ಶಿಸ್ತು ಕಲಿಸಲು ಹಿಂದಿನ ಕಾಲದಿಂದಲೂ ಅನುಸರಿಸುತ್ತಾ ಬಂದಿರುವ ಮಾರ್ಗ ಶಿಕ್ಷಿಸುವುದು. ಮಾಡಿರುವ ತಪ್ಪಿಗೆ ಶಿಕ್ಷೆ ಕೊಟ್ಟರೆ ಅದನ್ನು ಮರುಕಳಿಸುವುದಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ. ಹೀಗೆ ತಮ್ಮ ಮಕ್ಕಳು ಶಿಸ್ತಿನಿಂದ ಇರಬೇಕು ಎಂದು ಬಯಸುವವರೂ ತಮ್ಮ ಮಕ್ಕಳನ್ನು ಮೊದಲು ಮಾತಲ್ಲಿ ಬೈದು ಕೊನೆಗೆ ಅದನ್ನೂ ಕೇಳದಾದಾಗ ಶಿಕ್ಷಿಸುತ್ತಾರೆ. ಆದರೆ ಶಿಕ್ಷೆಗೂ ಬಗ್ಗದವರಿಗೆ ಏನು ಮಾಡಬೇಕು ಎನ್ನುವ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಕೊಟ್ಟಿರುವ ಶಿಕ್ಷೆ ಸರಿಯಾರಿರಲಿಲ್ಲ ಇನ್ನೂ ನಾಲ್ಕು ಏಟು ಬಾರಿಸಬೇಕಿತ್ತು ಎನ್ನುವವರು ಬಹಳ ಜನ.
ಆದರೆ ಹೀಗೆ ಹೆಚ್ಚು ಹೆಚ್ಚು ಹೊಡೆಯುತ್ತಾ ಹೋದಾಗಲೂ ಮಕ್ಕಳು ಸುಧಾರಿಸಿ ಸರಿದಾರಿಗೆ ಬರುತ್ತಾರೆ ಎಂದೇನಿಲ್ಲ. ಹಾಗಾದರೆ ಸಾಮಾನ್ಯವಾದ ಶಿಕ್ಷೆಗೆ ಬಗ್ಗದ ಮಕ್ಕಳಿಗೆ ಯಾವ ತರಹದ ಶಿಕ್ಷೆ ನೀಡಬೇಕು ಎಂಬ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಮಾತೂ ಕೇಳುತ್ತಿಲ್ಲ ಶಿಕ್ಷೆಗೂ ಬಗ್ಗುತ್ತಿಲ್ಲ ಎಂದ ಕೂಡಲೆ ಮಕ್ಕಳನ್ನು ಹೇಗೆ ಬೇಕಾದರೆ ಹಾಗೆ ಬೆಳೆಯಲಿ ಎಂದು ಬಿಡುವಂತಿಲ್ಲ. ಎಲ್ಲಾ ತಂದೆ ತಾಯಿಗೂ ಸಮಾಜದಲ್ಲಿ ತನ್ನ ಮಗು ಒಳ್ಳೆಯ ಹೆಸರು ಮಾಡಲಿ ಎಂಬ ಆಸೆ ಇದ್ದೇ ಇರುತ್ತದೆ. ಈ ಕೆಲವು ವಿಧಾನಗಳನ್ನು ಅನುಸರಿಸಿದರೆ ತಮ್ಮ ಮಕ್ಕಳನು ಶಿಸ್ತಿನ ಜೀವನಕ್ಕೆ ಬರುವಂತೆ ಮಾಡಬಹುದು.
ಶಿಸ್ತು ಕಲಿಸುವುದು ಕೇವಲ ಶಿಕ್ಷೆಯಿಂದ ಸಾಧ್ಯವಿಲ್ಲ
ಪ್ರತೀ ಸಲ ತಪ್ಪು ಮಾಡಿದಾಗ ಶಿಕ್ಷೆ ನೀಡಿಯೂ ತಮ್ಮ ಮಗು ಅದೇ ತಪ್ಪನ್ನು ಮರುಕಳಿಸುತ್ತಿದೆ ಎಂದಾದರೆ ನೀವು ನೀಡುತ್ತಿರುವ ಶಿಕ್ಷೆಗೂ ಮಾಡಿರುವ ತಪ್ಪಿಗೂ ಹೊಂದಾಣಿಕೆ ಆಗುತ್ತಿಲ್ಲ. ಪ್ರತೀ ಸಲ ತಮ್ಮ ಮಗು ಸರಿಯಲ್ಲದ ವರ್ತನೆ ತೋರಿದಾಗ ಮಗುವನ್ನು ಕೋಣೆಯೊಳಗೆ ಕೂಡಿ ಹಾಕಿಟ್ಟರೆ ಅವರು ಅಲ್ಲೇ ಖುಷಿಯಿಂದ ಇರಲು ಆರಂಭಿಸಬಹುದು. ಹೊರಗಿನ ವಾತಾವರಣ ಬೇಡ ಎಂದು ಅನ್ನಿಸಿದಾಗಲೆಲ್ಲಾ ಅಂತಹ ವರ್ತನೆ ತೋರಿ ಕೋಣೆಯೊಳಗೆ ಸೇರಿಕೊಳ್ಳಲು ತಾವೇ ಬಯಸಬಹುದು.
ಮೊದಲಿಗೆ ತಮ್ಮ ಮಗ ಅಥವಾ ಮಗಳು ಇಂತಹ ವರ್ತನೆ ಯಾಕೆ ತೋರುತ್ತಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆ ವರ್ತನೆ ಯಾಕೆ ಸರಿಯಲ್ಲ ಮುಂದೆ ಇದರಿಂದ ಯಾವ ತೊಂದರೆ ಆಗುತ್ತದೆ ಎನ್ನುವುದನ್ನು ಮಗುವಿಗೆ ಅರ್ಥೈಸಬೇಕು. ಕೇವಲ ತನಗೆ ಬೈಯುತ್ತಲೇ ಇರುತ್ತಾರೆ ಎಂಬ ಮನಸ್ಥಿತಿ ಮಕ್ಕಳಿಗೆ ಬಾರದಂತೆ ನೋಡಬೇಕು. ಕೇವಲ ಬೈದು ಸುಮ್ಮನಿರಿಸಲು ಪ್ರಯತ್ನಿಸುವುದಕ್ಕಿಂತ ಮಾಡಿದ ತಪ್ಪೇನೂ ಹಾಗೂ ಸರಿಯಾದ ವರ್ತನೆ ಯಾವುದಾಗಿತ್ತು ಎನ್ನುವ ಸ್ಪಷ್ಟತೆ ನೀಡಬೇಕು.
ಮಾಡಿದ ತಪ್ಪು ಮರುಕಳಿಸದಂತೆ ಶಿಕ್ಷೆ ಇರಲಿ
ಕೇವಲ ಮಾತಿನಲ್ಲಿ ಹೇಳಿದಾಗ ತಮ್ಮ ಮಗ / ಮಗಳು ಕೇಳುತ್ತಿಲ್ಲ ಎಂದಾದಾಗ ಶಿಕ್ಷೆ ಕೊಡಿ ಆದರೆ ಎಲ್ಲಾದಕ್ಕೂ ಬೆತ್ತದ ಅಥವಾ ಕೈ ಏಟು ಒಂದೇ ಶಿಕ್ಷೆ ಆಗದಿರಲಿ. ನಿಮ್ಮ ಮಗ ತನ್ನ ಕೋಣೆಯನ್ನು ಸ್ವಚ್ಛ ಗೊಳಿಸಲಿಲ್ಲ ಎಂದಾದಾಗ ಮುಂದಿನ ದಿನ ತನ್ನ ಕೋಣೆಯ ಜೊತೆಗೆ ಮನೆಯ ಹಾಲ್ ಕೂಡ ಸ್ವಚ್ಛಗೊಳಿಸಬೇಕು ಎನ್ನುವ ಶಿಕ್ಷೆ ನೀಡಿ. ತನಗಿಂತ ಹಿರಿಯರ ಜೊತೆಗೆ ಸರಿಯಾಗಿ ಮಾತನಾಡಲಿಲ್ಲ ಎಂದಾದಾಗ ಅಂದು ಅವನನ್ನು ಆಡಲು ಕಳಿಸಬೇಡಿ. ಹೀಗೆ ಮಾಡಬೇಕಾಗಿರುವ ದುಪ್ಪಟ್ಟು ಕೆಲಸ ನೀಡಿ ಅಥವಾ ಬಹಳ ಇಷ್ಟ ಪಡುವ ವಿಷಯವನ್ನು ಮಾಡದೇ ಇರಲು ನಿಯಂತ್ರಿಸಿದಾಗ ಅಂತಹ ವರ್ತನೆ ಮರುಕಳಿಸುವುದಿಲ್ಲ.
ಹೊಸದೇನನ್ನಾದರೂ ಪ್ರಯತ್ನಿಸಿ
ಪ್ರತೀ ಸಲ ತಪ್ಪು ಮಾಡಿದಾಗಲೂ ಹೊಡೆಯುತ್ತಾ ಇದ್ದರೆ ಅದು ಮುಂದೊಂದು ದಿನ ತಂದೆ ಮಗನ ನಡುವೆ ಕಲಹ ತರುತ್ತದೆ ಬಿಟ್ಟರೆ ಅದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ನೀವು ನಿಮ್ಮ ಮಗನ ಜೊತೆಗೆ ಆಡಲು ಹೋಗುತ್ತೀರಿ ಅಥವಾ ಅವರನ್ನು ಪ್ರತೀ ವಾರ ಹೊರಗೆ ಕರೆದುಕೊಂಡು ಹೋಗಿತ್ತೀರಿ ಎಂದಾದರೆ ತಪ್ಪು ಮಾಡಿದ ದಿನ ಅಥವಾ ವಾರ ಅದನ್ನು ಮಾಡಬೇಡಿ. ಹೀಗೆ ನಿಮ್ಮ ಮಗ ಅಥವಾ ಮಗಳು ಯಾವ ಶಿಕ್ಷೆ ಕೊಟ್ಟರೆ ಸರಿದಾರಿಗೆ ಬರುತ್ತಾಳೆ ಮತ್ತು ಯಾವ ಒಂದು ವಿಷಯವನ್ನು ಅವರಿಂದ ಕಿತ್ತುಕೊಂಡಾಗ ಸರಿದಾರಿಗೆ ಬರುತ್ತಾರೆ ಎಂಬುದನ್ನು ನೀವೇ ನಿರ್ಧರಿಸಿ ಅಂತಹ ಶಿಕ್ಷೆ ಕೊಡಿ.
ಯಾವುದು ತಪ್ಪು ಮತ್ತು ಏನು ಮಾಡಬೇಕಿತ್ತು ಎನ್ನುವ ಸ್ಪಷ್ಟತೆ ಕೊಡಿ
ಯಾವುದು ತಪ್ಪು ಎಂದು ಹೇಳುವ ಜೊತೆಗೆ ಅದು ಯಾಕೆ ತಪ್ಪು ಅದಕ್ಕೆ ಪರ್ಯಾಯ ವರ್ತನೆ ಏನು ಎನ್ನುವುದರ ಬಗ್ಗೆಯೂ ಸ್ಪಷ್ಟತೆ ಕೊಡಿ. ಮಾಡಿರುವ ತಪ್ಪು ಮರುಕಳಿಸದಾಗ ಅಥವಾ ಸರಿಯಾದ ವರ್ತನೆಯನ್ನು ಅಭಿನಂದಿಸಿ. ಕೇವಲ ತಪ್ಪು ಮಾಡಿದಾಗ ತಿದ್ದುವುದಷ್ಟೇ ಅಲ್ಲ. ಮಾಡಿರುವ ತಪ್ಪನ್ನು ಮರಳಿ ಮಾಡದೇ ಇದ್ದಾಗ ಅದನ್ನು ಗುರುತಿಸಿ ಅದಕ್ಕೆ ಸರಿಯಾದ ಬಹುಮಾನ ನೀಡಿ.