ಕಾಸರಗೋಡು: ಸರ್ಕಾರಿ, ಖಾಸಗಿ ವಲಯದ ಆಯುರ್ವೇದ ವೈದ್ಯರ ಸಾರ್ವಜನಿಕ ಸಂಘಟನೆ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎಎಂಎಐ)ದ 44ನೇ ರಾಜ್ಯ ಕೌನ್ಸಿಲ್ ಸಮಾವೇಶ ಕಾಸರಗೋಡು ಜಿಲ್ಲೆಯ ಕಳನಾಡ್ ಕನ್ವೆನ್ಷನ್ ಸೆಂಟರ್ ಡಾ.ಎಂ.ಎಂ.ಬಾಲಚಂದ್ರ ಮೆನನ್ ನಗರದಲ್ಲಿ ಶನಿವಾರ ಆರಂಭಗೊಂಡಿತು.
ಸಂಸದ ರಾಜಮೋಹನ್ ಉನ್ನಿಥಾನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜ್ಯಾಧ್ಯಕ್ಷ ಡಾ.ಸಿ.ಡಿ. ಲೀನಾ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೆ ಮೊದಲು ನಡೆದ ವಾಣಿಜ್ಯ ಮೇಳವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಸ್ವಾಗತ ಸಂಘ ಉಪಾಧ್ಯಕ್ಷ ಡಾ.ಪಿ.ಆರ್. ಪ್ರವೀಣ್ ಹಾಗೂ ಜಂಟಿ ಸಂಚಾಲಕಿ ಡಾ.ಶ್ರುತಿ ಪಂಡಿತ್ ಉಪಸ್ಥಿತರಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸಿ. ಅಜಿತ್ ಕುಮಾರ್ ಸಂಘಟನಾ ಕಾರ್ಯ ವರದಿ, ರಾಜ್ಯ ಮಹಿಳಾ ಸಂಚಾಲಕಿ ಡಾ.ಟಿಂಟು ಎಲಿಜಬೆತ್ ಟಾಮ್ ಮಹಿಳಾ ಸಮಿತಿ ವರದಿ ಹಾಗೂ ರಾಜ್ಯ ಖಜಾಂಚಿ ಡಾ.ಮಹಮ್ಮದ್ ರಾಜಿ ಅಂಕಿ ಅಂಶ ಮಂಡಿಸಿದರು.
7ರಂದು ಬೆಳಗ್ಗೆ 9ಕ್ಕೆ ನಡೆಯುವ ಸಾರ್ವಜನಿಕ ಸಭೆಯನ್ನು ಆಯುಷ್, ಆರೋಗ್ಯ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ವೀಣಾ ಜಾರ್ಜ್ ಉದ್ಘಾಟಿಸುವರು. ಶಾಸಕ ಇ ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕ ಎಂ ರಾಜಗೋಪಾಲನ್ ದಿಕ್ಸೂಚಿ ಭಾಷಣ ಮಾಡುವರು. ರಾಷ್ಟ್ರೀಯ ಆಯುಷ್ ಮಿಷನ್ ಕೇರಳದ ನಿರ್ದೇಶಕ ಡಾ.ಸಜಿತ್ ಬಾಬು ಐಎಎಸ್, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಳ್ಳುವರು. ಸಮ್ಮೇಳನದಲ್ಲಿ ಸಂಘವು ಪ್ರಕಟಿಸಿರುವ ವಿವಿಧ ಪ್ರಶಸ್ತಿಗಳು ಹಾಗೂ ವಾರ್ಷಿಕ ಮಾಧ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಆಯುರ್ವೇದ ವಿಜ್ಞಾನದ ಹೊಸ ಪುಸ್ತಕ ಬಿಡುಗಡೆ ನಡೆಯಲಿದೆ. ಸಮ್ಮೇಳನದ ಅಂಗವಾಗಿ ರಾಜ್ಯ ಪರಿಷತ್ತು, ಚರ್ಚೆ, ನಿರ್ಣಯ ಮಂಡನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
ಮಾಧ್ಯಮ ಪ್ರಶಸ್ತಿ ಪ್ರಕಟ:
ಭಾರತೀಯ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಷನ್ ರಾಜ್ಯ ಮಟ್ಟದಲ್ಲಿ ವಾರ್ಷಿಕವಾಗಿ ನೀಡುವ ಮಾಧ್ಯಮ ಪ್ರಶಸ್ತಿಗೆ ಕೇರಳ ಕೌಮುದಿ ಕೊಚ್ಚಿ ಆವೃತ್ತಿಯ ವಿಶೇಷ ವರದಿಗಾರ ಎಂ.ಎಸ್.ಸಜೀವನ್ ಅವರನ್ನು ಆಯ್ಕೆ ಮಾಡಲಾಗಿದೆ. ಆಯುರ್ವೇದ ವಿಜ್ಞಾನದ ವಿಶಿಷ್ಟತೆ, ವಿಜ್ಞಾನ ಮತ್ತು ಪ್ರಯೋಜನಗಳನ್ನು ಜನರಿಗೆ ತಲುಪಿಸುವ ರೀತಿಯಲ್ಲಿ ಪತ್ರಿಕೆ, ದೂರದರ್ಶನ ಮತ್ತು ರೇಡಿಯೋ ಮಾಧ್ಯಮಗಳ ಮೂಲಕ ಆಯುರ್ವೇದಕ್ಕೆ ಸಂಬಂಧಿಸಿದ ಮಹತ್ವದ ಸುದ್ದಿ ಪ್ರಕಟಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಪ್ರಶಸ್ತಿ 15ಸಾವಿರ ರಊ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.