ಅವರಿಗೆ ಬಿಪಿ ಇದೆ, ಹಾಗಾಗಿ ಬೇಗನೆ ಕೋಪಗೊಳ್ಳುತ್ತಾರೆ, ಚಿಕ್ಕ ವಿಷಯಕ್ಕೆ ಸಿಕ್ಕಾಪಟ್ಟೆ ಕೋಪಗೊಳ್ಳುತ್ತಾರೆ ಎಂದು ಹೇಳುವುದನ್ನು ಕೇಳಿರಬಹುದು. ನಿಜವಾಗಲೂ ಅತ್ಯಧಿಕ ರಕ್ತದೊತ್ತಡದಿಂದಾಗಿ ಕೋಪ ಬರುವುದಾ ಅಥವಾ ಕೋಪ ಹೆಚ್ಚಾದಾಗ ರಕ್ತದೊತ್ತಡ ಹೆಚ್ಚಾಗುವುದಾ? ಈ ಕುರಿತು ವಿವರವಾಗಿ ನೋಡೋಣ ಬನ್ನಿ:
ಅತ್ಯಧಿಕ ರಕ್ತದೊತ್ತಡದಿಂದಾಗಿ ಕೋಪ ಹೆಚ್ಚಾಗಲ್ಲ, ಆದರೂ ಕೋಪಕ್ಕೂ-ರಕ್ತದೊತ್ತಡಕ್ಕೂ ಸಂಬಂಧವಿದೆ ಬಿಪಿ ಸಮಸ್ಯೆ ಇದೆ ಎಂದರೆ ಕೋಪ ಬರುವುದಿಲ್ಲ, ಆದರೆ ಅತ್ಯಧಿಕ ಕೋಪಗೊಳ್ಳುವುದರಿಂದ ರಕ್ತದೊತ್ತಡ ಹೆಚ್ಚಾಗಿ ಸಮಸ್ಯೆ ಉಂಟಾಗಬಹುದು. ಕೋಪದಿಂದಾಗಿ ರಕ್ತದೊತ್ತಡ ಹೆಚ್ಚಾಗಿ ಇದರಿಂದ ಹೃದಯಾಘಾತ, ಹೃದಯ ಸ್ತಂಭನ ಈ ಬಗೆಯ ಸಮಸ್ಯೆಯೂ ಉಂಟಾಗಬಹುದು. ಕೋಪದಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ, ಆದ್ದರಿಂದ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು.ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿರುವವರು ಬಿಪಿ ನಿಯಂತ್ರಣದಲ್ಲಿಡಲು ಸಲಹೆಗಳು:
ನಿಮ್ಮ ಸೊಂಟದ ಸುತ್ತಳತೆ ಕಡೆಗೆ ಗಮನಹರಿಸಿ
ಯಾವಾಗ ಸೊಂಟದ ಸುತ್ತಳತೆ ಹೆಚ್ಚಾಗುವುದು ಅಂದರೆ ಮೈ ತೂಕ ಹೆಚ್ಚಾಗುವುದು, ಆವಾಗ ರಕ್ತದೊತ್ತಡಸ ಸಮಸ್ಯೆ ಕೂಡ ಹೆಚ್ಚಾಗುವುದು. ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಲು ಮೈ ತೂಕವನ್ನು ನಿಯಂತ್ರಣದಲ್ಲಿಡಬೇಕು.
ಪ್ರತಿನಿತ್ಯ ವ್ಯಾಯಾಮ ಮಾಡಿ
ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು. ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಲೇಬೇಕು. ವಾಕಿಂಗ್, ಜಿಮ್, ಯೋಗಾಸನ ಹೀಗೆ ನಿಮಗೆ ಯಾವುದು ಇಷ್ಟವಾಗುವುದೋ ಅದನ್ನು ಮಾಡಿ, ಜೊತೆಗೆ 15 ನಿಮಿಷ ಪ್ರಾಣಯಾಮ ಮಾಡಿ, ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗಿದೆ.
ಆರೋಗ್ಯಕರ ಆಹಾರ ಸೇವಿಸಿ
ನಮ್ಮ ಆಹಾರಕ್ರಮ ಕೂಡ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವುದು. ಆದ್ದರಿಂದ ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬಳಸಿ, ಮಾಂಸಾಹಾರ ಮಿತಿಯಲ್ಲಿ ಸೇವಿಸಿ. ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್ಸ್ ಇವುಗಳಿಂದ ದೂರವಿರಿ.
ಸೋಡಿಯಂಶ ಅಂಶವಿರುವ ಆಹಾರವನ್ನು ಕಡಿಮೆ ಸೇವಿಸಿ
ಆಹಾರದ ಲೇಬಲ್ ಓದಿ: ನೀವು ಯಾವುದಾದರೂ ಆಹಾರವನ್ನು ಖರೀದಿಸುವಾಗ ಆಹಾರದ ಲೇಬಲ್ ಓದಿ.
* ಉಪ್ಪಿನಂಶ ಕಡಿಮೆ ಸೇವಿಸಿ: ಸಂಸ್ಕರಿಸಿದ ಆಹಾರ, ಉಪ್ಪಿನಕಾಯಿ, ಚಿಪ್ಸ್ ಇವುಗಳಿಂದ ದೂರವಿರಿ
* ಬಿಪಿ ಸಮಸ್ಯೆ ಇರುವವರು ಉಪ್ಪು ಸ್ವಲ್ಪ ಕಡಿಮೆ ಬಳಸಿ.
* ಮದ್ಯ ಮಿತಿಯಲ್ಲಿರಲಿ
* ಧೂಮಪಾನದಿಂದ ದೂರವಿರಿ
ಚೆನ್ನಾಗಿ ನಿದ್ದೆ ಮಾಡಿ
ಮನುಷ್ಯನಿಗೆ ಕಡಿಮೆಯೆಂದರೆ 8 ಗಂಟೆ ನಿದ್ದೆ ಅವಶ್ಯಕ, ಆದ್ದರಿಂದ ನಿದ್ದೆ ಚೆನ್ನಾಗಿ ಮಾಡಿ. ಆದಷ್ಟು ಒಂದೇ ಸಮಯದಲ್ಲಿ ನಿದ್ದೆಮಾಡಲು ಪ್ರಯತ್ನಿಸಿ. ರಾತ್ರಿ 10 ಗಂಟೆಯ ಒಳಗೆ ಮಲಗಲು ಪ್ರಯತ್ನಿಸಿ, ಬೆಳಗ್ಗೆ 6-6.30ಕ್ಕೆ ಎದ್ದೇಳಲು ಪ್ರಯತ್ನಿಸಿ. ಒಳ್ಳೆಯ ನಿದ್ದೆ ನಿಮ್ಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.