ಬದಿಯಡ್ಕ: ಜಿಲ್ಲೆಯಲ್ಲಿ ಈ ವರ್ಷದ ಎಸ್‍ಎಸ್‍ಎಲ್‍ಸಿ ಉತ್ತೀರ್ಣತೆಯ ಶೇಕಡಾವಾರು ಹೆಚ್ಚಳವಾಗಿದ್ದು, ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗದ ಬಗ್ಗೆ ಚಿಂತಿತರಾಗಿದ್ದಾರೆ.
ಈ ವರ್ಷ ಶೇ.99.82ರಷ್ಟು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 19501 ವಿದ್ಯಾರ್ಥಿಗಳ ಪೈಕಿ 19466 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ 10066 ಮಂದಿ ಬಾಲಕರು ಮತ್ತು 9400 ಮಂದಿ ಬಾಲಕಿಯರು. ಏತನ್ಮಧ್ಯೆ, ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೇವಲ 14250 ಪ್ಲಸ್ ಒನ್ ಸೀಟುಗಳು ಮಾತ್ರ ಲಭ್ಯವಿವೆ. ಇನ್ನುಳಿದ 5216 ಮಂದಿ ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ ಕೇಂದ್ರೀಯ ಪಠ್ಯಕ್ರಮದಲ್ಲಿ ವ್ಯಾಸಂಗಗೈದ ಹೆಚ್ಚಿನ ವಿದ್ಯಾರ್ಥಿಗಳು ಪ್ಲಸ್ ಒನ್ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವುದರಿಂದ ಇನ್ನಷ್ಟು ಖಾಲಿ ಸೀಟುಗಳ ಅಗತ್ಯತೆ ತಲೆದೋರಲಿದ್ದು, ದೊಡ್ಡ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.
ಕಾಸರಗೋಡು ಸರ್ಕಾರಿ ಶಾಲೆಗಳಲ್ಲಿ 8550 ಪ್ಲಸ್ ಒನ್ ಸೀಟುಗಳಿವೆ. ಅನುದಾನಿತ ಶಾಲೆಗಳಲ್ಲಿ 3650 ಮತ್ತು ಅನುದಾನರಹಿತ ಶಾಲೆಗಳಲ್ಲಿ 2050 ಸೀಟುಗಳಿವೆ. ಈ ಬಾರಿ 2667 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಈ ಬಾರಿಯೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅಪೇಕ್ಷಿತ ಶಾಲೆ ಮತ್ತು ಆದ್ಯತೆಯ ಕೋರ್ಸ್ ಸವಾಲಾಗಲಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಕನಿಷ್ಠ ಅಂಕಗಳಿಂದ ತೇರ್ಗಡೆಗೊಂಡ ವಿದ್ಯಾರ್ಥಿಗಳೇ ಹೆಚ್ಚು ಚಿಂತಾಕ್ರಾಂತರಾಗಿದ್ದಾರೆ. ಸೀಟು ಕೊರತೆಯ ಬಗ್ಗೆ ಅಧ್ಯಯನ ನಡೆಸಿದ ವಿ ಕಾರ್ತಿಕೇಯನ್ ಸಮಿತಿಯು ಮಲಬಾರ್‍ನಲ್ಲಿ 150 ಹೆಚ್ಚುವರಿ ಬ್ಯಾಚ್‍ಗಳನ್ನು ಅನುಮತಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಕಡಿಮೆ ಮಕ್ಕಳಿರುವ ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳ ಉಳಿಕೆಯಾಗುವ ಸೀಟುಗಳನ್ನು ಇಲ್ಲಿಗೆ ಸ್ಥಳಾಂತರಿಸುವಂತೆಯೂ ಸೂಚಿಸಲಾಗಿದೆ. ಬೇರೆ ಜಿಲ್ಲೆಗಳಿಗೆ ಬ್ಯಾಚ್‍ಗಳನ್ನು ಸ್ಥಳಾಂತರಿಸುವುದರ ವಿರುದ್ಧ ರಾಜಕೀಯ ಒತ್ತಡ ಮತ್ತು ಹೊಸ ಬ್ಯಾಚ್‍ಗಳನ್ನು ರಚಿಸುವ ಆರ್ಥಿಕ ಹೊರೆಯಿಂದಾಗಿ ಸರ್ಕಾರ ಇದಕ್ಕೆ ಮುಂದಾಗದು ಎಂದು ತಿಳಿದುಬಂದಿದೆ.
ಕಳೆದ ವರ್ಷದಂತೆ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೂಡಿಹಾಕಿ ಸೀಟುಗಳನ್ನು ಹೆಚ್ಚಿಸುವುದು ಪರಿಹಾರವಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ. ಇದರಿಂದ ಕಲಿಕೆಯ ಗುಣಮಟ್ಟದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಶಿಕ್ಷಕರು ಮತ್ತು ಪೋಷಕರು. ಪ್ಲಸ್ ಒನ್ ತರಗತಿಗಳು ಜುಲೈ 5 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಜೂನ್ ವೇಳೆಗೆ ಪ್ಲಸ್ ಒನ್ ಕೋರ್ಸ್‍ಗಳ ಪ್ರವೇಶ ಪ್ರಕ್ರಿಯೆ ಮುಗಿದು ಜುಲೈ 5 ರಂದು ತರಗತಿಗಳು ಪ್ರಾರಂಭವಾಗಲಿವೆ ಎಂದು ಸಚಿವರೇ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಯಾವುದೇ ಆತಂಕವಿಲ್ಲದೆ ಹೆಚ್ಚಿನ ಅಧ್ಯಯನಕ್ಕಾಗಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.