ಚಂಡೀಗಢ/ಲಾಹೋರ್: ಖಾಲಿಸ್ತಾನ ಭಯೋತ್ಪಾದಕ ಪರಮ್‌ಜಿತ್ ಸಿಂಗ್ ಪಂಜ್ವಾರ್‌ನನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಶನಿವಾರ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಚಂಡೀಗಢ/ಲಾಹೋರ್: ಖಾಲಿಸ್ತಾನ ಭಯೋತ್ಪಾದಕ ಪರಮ್‌ಜಿತ್ ಸಿಂಗ್ ಪಂಜ್ವಾರ್‌ನನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಶನಿವಾರ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಲಾಹೋರ್‌ನಲ್ಲಿರುವ ತನ್ನ ಮನೆಯ ಸಮೀಪ ನಡೆದು ಹೋಗುತ್ತಿದ್ದ ಪರಮ್‌ಜಿತ್ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಸಾಯಿಸಿದ್ದಾರೆ ಎಂದು ತಿಳಿಸಿವೆ.
ಪಂಜಾಬ್‌ನ ತರನ್ ತಾರನ್ ಮೂಲದ 63 ವರ್ಷದ ಪರಮ್‌ಜಿತ್ ಸಿಂಗ್ ನಿಷೇಧಿತ ಖಾಲಿಸ್ತಾನ ಕಮಾಂಡೊ ಪಡೆಯ ಪಂಜ್ವಾರ್ ಗುಂಪನ್ನು ಮುನ್ನಡೆಸುತ್ತಿದ್ದ ಎಂದಿವೆ.
ಕಳ್ಳನೋಟು, ಮಾದಕವಸ್ತು, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈತನನ್ನು 2020ರ ಜುಲೈನಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿತ್ತು.
ಪರಮ್‌ಜಿತ್ 1986ರಲ್ಲಿ ಖಾಲಿಸ್ತಾನ ಕಮಾಂಡೊ ಪಡೆಗೆ ಸೇರ್ಪಡೆಗೊಂಡಿದ್ದ. ಬಳಿಕ ಆತ ಪಾಕಿಸ್ತಾನಕ್ಕೆ ತೆರಳಿದ್ದ ಎಂದೂ ಮೂಲಗಳು ಹೇಳಿವೆ.
ಲಾಹೋರ್‌ನಲ್ಲಿದ್ದು ಸಂಘಟನೆಯನ್ನು ಮುನ್ನಡೆಸುತ್ತಿದ್ದ ಈತ, ಪಾಕಿಸ್ತಾನದ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಮತ್ತು ಭಾರತದೊಳಕ್ಕೆ ನುಸುಳುವ ಉಗ್ರರಿಗೂ ಸಹಾಯ ಮಾಡುತ್ತಿದ್ದ. ಆದರೆ ಎರಡು ವರ್ಷಗಳಿಂದ ಇಂತಹ ಚಟುವಟಿಕೆಗಳಲ್ಲಿ ಸಕ್ರಿಯನಾಗಿರಲಿಲ್ಲ ಎಂದೂ ಮಾಹಿತಿ ನೀಡಿವೆ.
ಪಾಕಿಸ್ತಾನದ ರೇಡಿಯೊದ ಮೂಲಕ ಭಾರತ ವಿರೋಧಿ ಮತ್ತು ಪ್ರತ್ಯೇಕತಾವಾದದ ಪರವಾಗಿರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಲ್ಲೂ ಈತ ಶಾಮೀಲಾಗಿದ್ದ ಮತ್ತು ಭಾರತ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದ್ದ ಎಂದಿವೆ.