ಕಾಸರಗೋಡು: ಅಭಿವೃದ್ಧಿ ವಿಚಾರದಲ್ಲಿ ಕಾಸರಗೋಡು ನಗರಸಭೆಯ ಬಿಜೆಪಿ ಕೌನ್ಸಿಲರ್‍ಗಳು ಪ್ರತಿನಿಧಿಸುವ ವಾರ್ಡುಗಳಿಗೆ ಆಡಳಿತ ಪಕ್ಷ ಮುಸ್ಲಿಂ ಲೀಗ್ ತಾರತಮ್ಯ ಮಾಡುತ್ತಿದ್ದು, ಇದು ಜನತೆಗೆ ಎಸಗುವ ವಂಚನೆಯಾಗಿದೆ ಎಂದು ಬಿಜೆಪಿ ರಾಜ್ಯ ಸೆಲ್ ಸಂಯೋಜಕ ಅಶೋಕನ್ ಕುಳ£ಡು ತಿಳಿಸಿದ್ದಾರೆ.
ನಗರದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಹಾಗೂ ಬಿಜೆಪಿ ಕೌನ್ಸಿಲರ್‍ಗಳ ವಾರ್ಡ್‍ಗಳಿಗೆ ಅನುದಾನ ನೀಡದಿರುವುದನ್ನು ವಿರೋಧಿಸಿ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿಯು ಕಾಸರಗೋಡು ನಗರಸಭಾ ಕಚೇರಿ ಎದುರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾ ಉದ್ಘಾಟಿಸಿ ಮಾತನಾಡಿದರು:
ಆಡಳಿತ ಪಕ್ಷದ ಸದಸ್ಯರ ವಾರ್ಡ್‍ಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಾಗ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಇತರ ವಾರ್ಡ್‍ಗಳಲ್ಲಿ ಹಣವನ್ನು ತಡೆಹಿಡಿಯುತ್ತಿದ್ದರೆ, ಸ್ಥಳೀಯ ಸಂಸ್ಥೆಗಳಿಗೆ ಪಿಣರಾಯಿ ವಿಜಯನ್ ಸರ್ಕಾರ ಗಣನೀಯವಾಗಿ ಕಡಿತಗೊಳಿಸಿದೆ. ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್, ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ ಕೋಟ್ಯಂತರ ರೂ. ಮಂಜೂರುಗೊಳಿಸುತ್ತಿದ್ದು, ಇದನ್ನು ವಿನಿಯೋಗಿಸಲು ನಗರಸಭೆ ತಯಾರಾಗಬೇಕು ಎಂದು ತಿಳಿಸಿದರು. ಮೇ 18ರಂದು ಪಿಣರಾಯಿ ವಿಜಯನ್ ಸರ್ಕಾರ ಘೋಷಿಸಲಿರುವ ಎಲ್ಲ ಕ್ರಿಯಾ ಯೋಜನೆಗಳು ಕೇಂದ್ರ ಸರ್ಕಾರದ ಎನ್‍ಎಚ್‍ಎಂ ಮತ್ತು ಆಯುಷ್ ನಿಧಿಯಿಂದ ಪಡೆದ ಯೋಜನೆಗಳಾಗಿವೆ. ಅಭಿವೃದ್ಧಿ ಕಾರ್ಯಗಳಲ್ಲಿ ಮುಸ್ಲಿಂ ಲೀಗ್ ತಾರತಮ್ಯವನ್ನು ಕೊನೆಗೊಳಿಸದಿದ್ದಲ್ಲಿ ಬಿಜೆಪಿ ತನ್ನ ಪ್ರಬಲ ಹೋರಾಟವನ್ನು ಮುಂದುವರೆಸಲಿದೆ ಎಂದು ಅಶೋಕನ್ ಕುಳನಾಡ ಎಚ್ಚರಿಸಿದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರು ಹಾಗೂ ನಗರಸಭಾ ಸದಸ್ಯೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್. ಮಧು, ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್ ಪ್ರಭು, ಸುಕುಮಾರ್ ಕುದುರೆಪಾಡಿ, ಉಪಾಧ್ಯಕ್ಷ ರವೀಂದ್ರ ಪೂಜಾರಿ, ಕೋಶಾಧಿಕಾರಿ ಅರುಣ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಶ್ರೀಲತಾ ಟಿಚರ್, ಕೋಶಾಧಿಕಾರಿ ವೀಣಾಕುಮಾರಿ, ಅಧ್ಯಕ್ಷ ರಾಮಮೋಹನ್ ಉಪಸ್ಥಿತರಿದ್ದರು.. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ ಸ್ವಾಗತಿಸಿದರು.