ಪಟ್ನಾ: ಬಿಹಾರ ಸರ್ಕಾರವು ಕೈಗೊಂಡಿದ್ದ ಜಾತಿ ಗಣತಿಗೆ ಪಟ್ನಾ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಹಾಗೂ ನ್ಯಾಯಮೂರ್ತಿ ಮಧುರೇಶ್ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಜಾತಿ ಆಧಾರಿತ ಗಣತಿಯನ್ನು ಕೂಡಲೇ ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
'ಈಗಾಗಲೇ ಕಲೆಹಾಕಲಾಗಿರುವ ದತ್ತಾಂಶಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಪೀಠವು ಅಂತಿಮ ತೀರ್ಪು ಪ್ರಕಟಿಸುವವರೆಗೂ ಈ ದತ್ತಾಂಶಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ' ಎಂದೂ ಸರ್ಕಾರಕ್ಕೆ ತಾಕೀತು ಮಾಡಿದೆ.
'ಅರ್ಜಿದಾರರು ದತ್ತಾಂಶದ ಸಮಗ್ರತೆ ಹಾಗೂ ಸುರಕ್ಷತೆಯ ಪ್ರಶ್ನೆಯನ್ನು ಎತ್ತಿದ್ದಾರೆ. ಈ ಕುರಿತು ರಾಜ್ಯ ಸರ್ಕಾರವು ವಿವರವಾದ ಮಾಹಿತಿ ಒದಗಿಸಬೇಕಾಗಿದೆ' ಎಂದು ಪೀಠ ಹೇಳಿದೆ.
'ಸದ್ಯ ಅನುಸರಿಸುತ್ತಿರುವ ಮಾದರಿಯಲ್ಲಿ ಜಾತಿ ಗಣತಿ ಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಇದು ಜನಗಣತಿಗೆ ಸಮಾನವಾಗಿದ್ದು, ಸಂಸತ್ತಿನ ಶಾಸನಾತ್ಮಕ ಅಧಿಕಾರದ ಮೇಲೆ ಪರಿಣಾಮ ಉಂಟುಮಾಡುತ್ತದೆ' ಎಂದಿದೆ.
ರಾಜ್ಯ ಸರ್ಕಾರವು ಜಾತಿ ಗಣತಿಯ ಮೂಲಕ ಕಲೆಹಾಕಲಾಗುವ ದತ್ತಾಂಶಗಳನ್ನು ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರಿಗೂ ಹಂಚಿಕೆ ಮಾಡುವ ಉದ್ದೇಶ ಹೊಂದಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದೆ. ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿದೆ.
ಬಿಹಾರದಲ್ಲಿ ಈ ವರ್ಷದ ಜನವರಿ 7ರಿಂದ 21ರವರೆಗೂ ಮೊದಲ ಹಂತದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಏಪ್ರಿಲ್ 15 ರಂದು ಆರಂಭವಾಗಿದ್ದ ಎರಡನೇ ಹಂತದ ಗಣತಿಯು ಇದೇ 15ಕ್ಕೆ ಕೊನೆಗೊಳ್ಳಬೇಕಿತ್ತು.