ಕಾಸರಗೋಡು: ಐಕ್ಯರಂಗ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಅಡಕೆ ಕೃಷಿಕರ ಸಂಗಮ ಮೇ 4ರಂದು ಬದಿಯಡ್ಕ ಗುರು ಸದನದಲ್ಲಿ ಜರುಗಲಿದ್ದು, ಕೃಷಿಕರ ಸಂರಕ್ಷಣೆಗಗಿ ಎಂಟು ಬೇಡಿಕೆಗಳನ್ನು ಅಂಗೀಕರಿಸುವಂತೆ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಿರುವುದಾಗಿ ಐಕ್ಯರಂಗ ಸಂಚಾಲಕ, ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 4ರಂದು ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭವನ್ನು ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ.ಸತೀಶನ್ ಉದ್ಘಾಡಿಸುವರು. ಐಕ್ಯರಂಗ ರಾಜ್ಯ ಸಮಿತಿ ಸಂಚಾಲಕ ಎಂ.ಎಂ ಹಸನ್ ಸೇರಿದಂತೆ ಯುಡಿಎಫ್ ರಾಜ್ಯ ನೇತಾರರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಿಂದಲೂ ಅಡಕೆ ಕೃಷಿಕರನ್ನು ಭಾಗವಹಿಸುವಂತೆ ಮಾಡಲಾಗುವುದು. ಈ ಸಂದರ್ಭ ಅಡಕೆ, ರಬ್ಬರ್, ತೆಂಗು, ಕರಿಮೆಣಸು ಬೆಳೆಯುವ ಕೃಷಿಕರು ನಾನಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಅಡಕೆಯ ಮೌಲ್ಯವರ್ಧಿತ ಉತ್ಪನ್ನ ತಯಾರಿಸುವ ಕಾರ್ಖಾನೆ ಕಾಸರಗೋಡಿನಲ್ಲಿ ಆರಂಭಿಸಬೇಕು, ಕೇರಫೆಡ್ ಮಾದರಿಯಲ್ಲಿ ಅಡಕೆ ಬೋರ್ಡ್ ಸ್ಥಾಪಿಸಬೇಕು, ಅಡಕೆ ಕೃಷಿಕರಿಗೆ ಸಬ್ಸಿಡಿ ನೀಡಬೇಕು, ಕಾಡುಮೃಗ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಬೆಲೆ ಸ್ಥಿರತೆ ಫಂಡ್ ಕಂಡುಕೊಳ್ಳಬೇಕು, ಸುಧಾರಿತ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಕ್ಯಾಮಪ್ಕೋ ಮಾದರಿಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಬೇಕು ಮುಂತಾದ ಬೇಡಿಕೆಯುಳ್ಳ ಮನವಿ ಸರ್ಕಾರಕ್ಕೆ ಸಮರ್ಪಿಸಲಾಗುವುದು ಎಂದೂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೂಕಳ್ ಬಾಲಕೃಷ್ಣನ್, ಎ.ಗೋವಿಂದನ್ ನಾಯರ್, ಮಾಹಿನ್ ಕೇಲೋಟ್ ಉಪಸ್ಥಿತರಿದ್ದರು.