ಮುಳ್ಳೇರಿಯ: ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅತಿಥಿಗೃಹ ಕಟ್ಟಡವು ಕಾಞಂಗಾಡ್ ನಗರಕ್ಕೆ ತಿಲಕಪ್ರಾಯವಾಗಿ ಮೂಡಿಬರುತ್ತಿದೆ. ಈಗಿರುವ ಕಟ್ಟಡದ ಬಳಿಯೇ ಹೊಸ ಕಟ್ಟಡವೂ ನಿರ್ಮಾಣವಾಗುತ್ತಿದೆ. ಕಟ್ಟಡವನ್ನು 10333.354 ಚ.ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. 4520.842 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ನೆಲ ಅಂತಸ್ತಿನಲ್ಲಿ ಎರಡು ಬೆಡ್ ರೂಂ, ವಿಐಪಿ ಕೊಠಡಿ, ಕೇರ್ ಟೇಕರ್ ರೂಂ, ಅಡುಗೆ ಕೋಣೆ ಮತ್ತು ಊಟದ ಪ್ರದೇಶ ಹಾಗೂ ಮೇಲಿನ ಮಹಡಿಯಲ್ಲಿ 5 ಬೆಡ್ ರೂಂ ಹಾಗೂ ವಿಐಪಿ ಕೊಠಡಿ ಇದೆ. ಮೇಲಿನ ಮಹಡಿಯಲ್ಲಿ ಸಮ್ಮೇಳ ಸಭಾಂಗಣವನ್ನೂ ಸಿದ್ಧಪಡಿಸಲಾಗುತ್ತದೆ. ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಟ್ಟಡದ ಮೇಲ್ಛಾವಣಿ ಸಾಂಪ್ರದಾಯಿಕ ಹಂಚಿನಿಂದ ಮಾಡಲ್ಪಟ್ಟಿದೆ. ಇದರ ಕಾಮಗಾರಿ ಪ್ರಗತಿಯಲ್ಲಿದೆ. ಮತ್ತು ನೆಲಕ್ಕೆ ಟೈಲ್ಸ್ ಹೊದಿಸಲಾಗುತ್ತಿದೆ.
ಆಗಸ್ಟ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ. ಎರಡು ಕೋಟಿ ಬಂಡವಾಳದಲ್ಲಿ ರೆಸ್ಟ್ ಹೌಸ್ ಗೆ ಹೊಸ ಕಟ್ಟಡ ಸಿದ್ಧವಾಗುತ್ತಿದೆ. ಪ್ರಸ್ತುತ ಅಂದಾಜಿನಲ್ಲಿ ವಿದ್ಯುತ್ ಕಾಮಗಾರಿಯನ್ನು ಸೇರಿಸಲಾಗಿಲ್ಲ. ಅದಕ್ಕಾಗಿ ಹೆಚ್ಚುವರಿ ಅಂದಾಜನ್ನು ಸಲ್ಲಿಸಲಾಗಿದೆ. ಪ್ರಸ್ತುತ ಅತಿಥಿಗೃಹ 5 ಕೊಠಡಿಗಳು, 2 ವಿಐಪಿ ಕೊಠಡಿಗಳು ಮತ್ತು ಹವಾನಿಯಂತ್ರಿತ ಕೊಠಡಿಯನ್ನು ಹೊಂದಿದೆ. ಆದರೆ ಹೊಸ ಕಟ್ಟಡ ಪೂರ್ಣಗೊಳ್ಳುವುದರೊಂದಿಗೆ ಕಾಞಂಗಾಡ್ ಅತಿಥಿಗೃಹ ‘ಎ’ ವರ್ಗದ ಸ್ಥಾನಮಾನಕ್ಕೆ ಏರಲಿದೆ. ಮೊದಲ ಪಿಣರಾಯಿ ಸರ್ಕಾರದ ಅವಧಿಯಲ್ಲಿ ಇ.ಚಂದ್ರಶೇಖರನ್ ಅವರು ಕಂದಾಯ ಮತ್ತು ವಸತಿ ಇಲಾಖೆ ಸಚಿವರಾಗಿದ್ದಾಗ ಬಜೆಟ್ ನಲ್ಲಿ 2 ಕೋಟಿ ರೂ.ಮೀಸಲಿರಿಸಿದ್ದರು. ಶಾಸಕ ಇ.ಚಂದ್ರಶೇಖರನ್ ಅವರ ಸತತ ಪ್ರಯತ್ನದ ಫಲವಾಗಿ ಅತಿಥಿಗೃಹದ ನೂತನ ಕಟ್ಟಡದ ಕನಸು ನನಸಾಗುತ್ತಿದೆ.