ಕುಂಬಳೆ: ದಿನ ಕಳೆದಂತೆ ತೆಂಗಿನ ಬೆಲೆ ಕುಸಿತವಾಗುತ್ತಿದ್ದು ತೆಂಗು ಕೃಷಿಕರನ್ನು ಸಂಕಷ್ಟಕ್ಕೆ ದೂಡಿದೆ.
ಮಾರುಕಟ್ಟೆಯಲ್ಲಿ ಕೆಜಿಗೆ 24 ರೂ.ಪ್ರಸ್ತುತ ಜಿಲ್ಲೆಯಲ್ಲಿ ತೆಂಗಿನ ಕಾಯಿಯೊಂದಕ್ಕೆ ಬೆಲೆಯಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಕುಸಿಯಲಿದೆ ಎನ್ನುತ್ತಾರೆ ವ್ಯಾಪಾರಿಗಳು. ಶುಕ್ರವಾರದ ವರೆಗೂ 26 ರೂಪಾಯಿ ಇದ್ದ ತೆಂಗಿನಕಾಯಿ ಬೆಲೆ 2 ರೂಪಾಯಿ ಇಳಿಕೆಯಾಗಿದ್ದು, ಜಿಲ್ಲೆಯಲ್ಲಿ ಹಸಿ ತೆಂಗಿನ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೆರಾಫೆಡ್‍ಗೆ ಶೇಖರಣಾ ಸೌಲಭ್ಯಗಳು ಸೀಮಿತವಾಗಿವೆ. ಕೃಷಿ ಇಲಾಖೆಯ ಸೂಚನೆಯಂತೆ ಪ್ರಸ್ತುತ ಜಿಲ್ಲೆಯಿಂದ ಸಹಕಾರ ಸಂಘಗಳ ಮೂಲಕ ಕೆರಾಫೆಡ್ ಗೆ ರೂ.34 ದರದಲ್ಲಿ ತೆಂಗಿನಕಾಯಿ ಖರೀದಿ ಮಾಡಲಾಗುತ್ತಿದೆ. ಇದು ಸಮರ್ಪಕವಾಗಿಲ್ಲ ಎನ್ನುತ್ತಾರೆ ರೈತರು.
ಸಾರ್ವಜನಿಕ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇಳಿಕೆಯಾಗಿರುವುದರಿಂದ ಮಿತಿಗಿಂತ ಹೆಚ್ಚು ಖರೀದಿ ಮಾಡಲು ಕೆರಾಫೆಡ್ ಗೆ ಸಾಧ್ಯವಾಗುತ್ತಿಲ್ಲ.ಕೇವಲ ಏಳು ಸಹಕಾರಿ ಸಂಘಗಳಿಗೆ ಮಾತ್ರ ತೆಂಗು ಖರೀದಿಗೆ ಅನುಮತಿ ನೀಡಲಾಗಿದೆ. ಅದೂ ವಾರದಲ್ಲಿ ಎರಡು ದಿನ ಮಾತ್ರ ಸಂಗ್ರಹಣೆ. ಒಂದು ದಿನದಲ್ಲಿ ಐದು ಟನ್‍ಗಳಿಗಿಂತ ಹೆಚ್ಚು ಸಂಗ್ರಹಿಸಲು ಅನುಮತಿಸಲಾಗುವುದಿಲ್ಲ. ಶೇಖರಣಾ ಕೇಂದ್ರದಲ್ಲಿ ತೆಂಗಿನಕಾಯಿ ಮಾರಾಟ ಮಾಡಬೇಕಾದರೆ ರೈತರು ಕೃಷಿ ಭವನದಿಂದ ತೆಂಗಿನ ಮರಗಳ ಸಂಖ್ಯೆ, ತೆಂಗಿನ ಲಭ್ಯತೆ ಸೇರಿದಂತೆ ಪರವಾನಗಿ ಪಡೆಯಬೇಕು. ಒಂದು ತೆಂಗಿನ ಮರದಿಂದ ವರ್ಷಕ್ಕೆ ಗರಿಷ್ಠ 70 ತೆಂಗಿನಕಾಯಿ ಸಿಗುತ್ತದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಆದರೆ ಉತ್ತಮ ಇಳುವರಿ ಕೊಡುವ ತೆಂಗಿನ ಮರದಿಂದ ನಾಲ್ಕೈದು ಪಟ್ಟು ಹೆಚ್ಚು ತೆಂಗಿನಕಾಯಿ ಸಿಗುತ್ತದೆ ಎನ್ನುತ್ತಾರೆ ರೈತರು. ಇದರಿಂದ ತೆಂಗಿನ ಉತ್ಪಾದನೆಯ ಐದನೇ ಒಂದು ಭಾಗವೂ ಸಂಗ್ರಹ ಕೇಂದ್ರಗಳ ಮೂಲಕ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತರು.
ತಮಿಳುನಾಡು ಮತ್ತು ಕರ್ನಾಟಕದಲ್ಲಿ ಉತ್ತಮ ಹವಾಮಾನ ಮತ್ತು ಸಮರ್ಪಕ ಮಳೆಯಿಂದಾಗಿ ಉತ್ಪಾದನೆ ಹೆಚ್ಚಿದ ಕಾರಣ ಕೇರಳದಲ್ಲಿ ತೆಂಗಿನಕಾಯಿ ಬೆಲೆ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ತೆಂಗಿನ ಎಣ್ಣೆ ಮತ್ತು ತೆಂಗಿನ ಹಾಲಿನಂತಹ ಸಂಬಂಧಿತ ಉತ್ಪನ್ನಗಳಿಗೆ ಕಡಿಮೆಯಾದ ಬೇಡಿಕೆಯು ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಜಿಲ್ಲೆಯ ಎಲ್ಲ ಪ್ರದೇಶಗಳಿಂದ ಹೆಚ್ಚಿನ ಸಹಕಾರ ಸಂಘಗಳ ಮೂಲಕ ಹಸಿ ತೆಂಗು ಖರೀದಿಸಿ ಉತ್ತಮ ಬೆಲೆ ಪಡೆಯುವ ವ್ಯವಸ್ಥೆ ಬಂದರೆ ರೈತರಿಗೆ ಹೆಚ್ಚಿನ ನಿರಾಳತೆ ಒದಗಲಿದೆÉ. ಸಹಕಾರಿ ಸಂಘಗಳ ಮೂಲಕ ಮಾರಾಟವಾಗುವ ತೆಂಗಿನ ಬೆಲೆ ಸಿಗುವುದು ವಿಳಂಬವಾಗುತ್ತಿರುವುದು ರೈತರಿಗೆ ಸಂಕಷ್ಟ ತಂದೊಡ್ಡುತ್ತಿದೆ. ಬೆಲೆ ಕಡಿಮೆಯಾದರೂ ಸಾರ್ವಜನಿಕ ಮಾರುಕಟ್ಟೆಯನ್ನೇ ಅವಲಂಬಿಸುವಂತಾಗಿದೆ.