ಕಾಸರಗೋಡು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2022-23 ನೇ ಸಾಲಿನಲ್ಲಿ ನಿವೃತ್ತರಾಗುವ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ, ಅಧ್ಯಾಪಿಕೆಯರಿಗೆ ವಿದಾಯ ಕೂಟ ಸಮಾರಂಭವು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ದಾಮ್ಲೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಎಸ್. ವಿ. ಭಟ್, ನಿವೃತ್ತ ಶಿಕ್ಷಣ ಉಪ ನಿರ್ದೇಶಕರಾದ ಮಹಾಲಿಂಗೇಶ್ವರ ರಾಜ್, ನಿವೃತ್ತ ಶಿಕ್ಷಕರೂ, ಸಂಘಟನೆಯ ನಿಕಟಪೂರ್ವ ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕ್ಕಳ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕರ ಸಂಘದ ಉಪಾಧ್ಯಕ್ಷರಾದ ಸುಕೇಶ್ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ಪದ್ಮಾವತಿ ಎಂ ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ 2022-23 ನೇ ಸಾಲಿನಲ್ಲಿ ನಿವೃತ್ತರಾಗುವ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ಅಧ್ಯಾಪಿಕೆಯರನ್ನು ಸಂಘಟನೆಯ ವತಿಯಿಂದ ಗೌರವಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಕೆ, ಕಾರ್ಯದರ್ಶಿ ಕವಿತಾ ಕೂಡ್ಲು, ಕೋಶಾಧಿಕಾರಿ ಜೀವನ್ ಕುಮಾರ್ ಎಂ, ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್, ಕೇಂದ್ರ ಸಮಿತಿಯ ಜತೆ ಕೋಶಾಧಿಕಾರಿ ಶರತ್ ಕುಮಾರ್, ಕಾಸರಗೋಡು ಉಪಜಿಲ್ಲಾ ಘಟಕದ ಅಧ್ಯಕ್ಷ ವಿನೋದ್ ರಾಜ್, ಕಾರ್ಯದರ್ಶಿ ಬಾಬು ಕೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.