ಬೆನೊಲಿಂ : ಗಡಿಯಾಚೆಗಿನ ಉಗ್ರಗಾಮಿ ಕೃತ್ಯಗಳು ಸೇರಿದಂತೆ ಭಯೋತ್ಪಾದಕರ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವುದನ್ನು ನಿಲ್ಲಿಸಬೇಕು ಎಂಬ ತನ್ನ ದೃಢ ನಿಲುವನ್ನು ಭಾರತ ಶುಕ್ರವಾರ ಸ್ಪಷ್ಟಪಡಿಸಿತು.
ಇಲ್ಲಿ ಆರಂಭವಾದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವಿದೇಶಾಂಗ ಸಚಿವರ ಸಮಾವೇಶದಲ್ಲಿ ಸಚಿವ ಎಸ್.ಜೈಶಂಕರ್ ಮಾತನಾಡಿದರು.
'ನಮ್ಮ ಕಣ್ಮುಂದೆಯೇ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಗಮನ ಹರಿಸದಿದ್ದಲ್ಲಿ ಅದು ಸದಸ್ಯ ರಾಷ್ಟ್ರಗಳ ಭದ್ರತೆಗೆ ಅಪಾಯವಾಗಿ ಪರಿಣಮಿಸುತ್ತದೆ. ಇಡೀ ಜಗತ್ತೇ ಕೋವಿಡ್-19 ಪಿಡುಗು ಹಾಗೂ ಅದರ ಪರಿಣಾಮಗಳ ವಿರುದ್ಧ ಹೋರಾಡುತ್ತಿದ್ದಾಗ, ಕೆಲವೆಡೆ ಭಯೋತ್ಪಾದನೆಯ ಬೆದರಿಕೆ ನಿಂತಿರಲಿಲ್ಲ' ಎಂದು ಅವರು ಪಾಕಿಸ್ತಾನ ಕುರಿತು ಪರೋಕ್ಷವಾಗಿ ಹೇಳಿದರು.
'ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿಯೂ ಸಮರ್ಥನೆ ಮಾಡಿಕೊಳ್ಳಲಾಗದು. ಅಲ್ಲದೇ, ಈ ಬೆದರಿಕೆ ವಿರುದ್ಧ ಹೋರಾಟ ನಡೆಸುವುದೇ ಶಾಂಘೈ ಸಹಕಾರ ಸಂಘಟನೆಯ ಮೂಲ ಉದ್ದೇಶವೇ ಆಗಿದೆ' ಎಂದು ಜೈಶಂಕರ್ ಪ್ರತಿಪಾದಿಸಿದರು.
'ಅಭಿವೃದ್ಧಿಯಲ್ಲಿ ಸಂಪರ್ಕ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಇದು ಸಂಘಟನೆಯ ಸದಸ್ಯ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆಯನ್ನು ಗೌರವಿಸುವ ರೀತಿಯಲ್ಲಿ ಈ ಸಂಪರ್ಕ ಇರಬೇಕು' ಎಂದರು.
ಒತ್ತಾಯ: ಆಫ್ಗನ್ ಮಹಿಳೆಯರ ಹಕ್ಕುಗಳನ್ನು ಗೌರವಿಸಿ, ರಕ್ಷಿಸಬೇಕು ಎಂದು ಭಾರತ, ರಷ್ಯಾ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವರು ಅಫ್ಗಾನಿಸ್ತಾನದ ಪ್ರಾತಿನಿಧಿಕ ಸರ್ಕಾರವನ್ನು ಒತ್ತಾಯಿಸಿದವು.
ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಪ್ರಸ್ತಾಪಿಸಿದ ಜೈಶಂಕರ್, 'ನಮ್ಮ ಪ್ರಯತ್ನಗಳೂ ಆಫ್ಗನ್ನರ ಏಳಿಗೆಗೆ ಪೂರಕವಾಗಿರಬೇಕು. ಮಾನವೀಯ ನೆರವು ಒದಗಿಸುವುದರ ಜೊತೆಗೆ, ಎಲ್ಲರನ್ನು ಒಳಗೊಳ್ಳುವ ಹಾಗೂ ಪ್ರಾತಿನಿಧಿಕ ಸರ್ಕಾರ ರಚನೆಯನ್ನು ಖಾತ್ರಿಪಡಿಸಬೇಕು, ಭಯೋತ್ಪಾದನೆ ಮತ್ತು ಡ್ರಗ್ಸ್ ಕಳ್ಳಸಾಗಣೆ ನಿಗ್ರಹ, ಮಹಿಳೆ, ಮಕ್ಕಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯೇ ನಮ್ಮ ಆದ್ಯತೆಯಾಗಬೇಕು' ಎಂದರು.
'ಎಲ್ಲರನ್ನು ಒಳಗೊಳ್ಳುವ ಸರ್ಕಾರ ರಚನೆಗೆ ಸಂಬಂಧಿಸಿ ತಾನು ನೀಡಿದ್ದ ಭರವಸೆಯಂತೆ ತಾಲಿಬಾನ್ ನಾಯಕತ್ವ ನಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ನಮ್ಮದು' ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗಿ ಲಾವರೋವ್ ಹೇಳಿದರು.
'ಅಫ್ಗಾನಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಸವಾಲಿನಿಂದ ಕೂಡಿರುವ ಜೊತೆಗೆ ವಿಪುಲ ಅವಕಾಶಗಳನ್ನು ಒದಗಿಸಿದೆ' ಎಂದು ಬಿಲಾವಲ್ ಭುಟ್ಟೊ ಹೇಳಿದರು.
ಸಚಿವ ಎಸ್.ಜೈಶಂಕರ್ ಅವರೊಂದಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ-ಜರ್ದಾರಿ -ಪಿಟಿಐ ಚಿತ್ರಎಸ್ಸಿಒ ಸಮಾವೇಶದ ಪ್ರಮುಖ ಅಂಶಗಳು * ಬಿಲಾವಲ್ ಭುಟ್ಟೊ-ಜರ್ದಾರಿ ಸೇರಿದಂತೆ ವಿದೇಶಾಂಗ ಸಚಿವರಿಗೆ ನಮಸ್ತೆ ಹೇಳಿ ಸ್ವಾಗತಿಸಿದ ಜೈಶಂಕರ್. ಹಸ್ತಲಾಘವ ಇಲ್ಲ * ರಷ್ಯನ್ ಚೀನಿ ಜೊತೆ ಇಂಗ್ಲಿಷ್‌ಗೂ ಎಸ್‌ಸಿಒದ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಯತ್ನ * ಇರಾನ್ ಬೆಲಾರೂಸ್‌ಗೆ ಎಸ್‌ಸಿಒ ಸದಸ್ಯತ್ವ ಪರಿಶೀಲನೆಯಲ್ಲಿ: ಜೈಶಂಕರ್ * 12 ವರ್ಷಗಳ ನಂತರ ಭಾರತಕ್ಕೆ ಪಾಕ್ ವಿದೇಶಾಂಗ ಸಚಿವರ ಭೇಟಿ. 2011ರಲ್ಲಿ ಹಿನಾ ರಬ್ಬಾನಿ ಖರ್ ಭಾರತಕ್ಕೆ ಭೇಟಿ ನೀಡಿ ಆಗಿನ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ಸಭೆ ನಡೆಸಿದ್ದರು
- ಭಯೋತ್ಪಾದನೆ ನಿರ್ಮೂಲನೆ ಜಂಟಿ ಹೊಣೆಗಾರಿಕೆ: ಬಿಲಾವಲ್ 'ಭಯೋತ್ಪಾದನೆ ಜಾಗತಿಕ ಭದ್ರತೆಗೆ ಅಪಾಯಕಾರಿಯಾಗಿದೆ. ಇದರ ವಿರುದ್ಧ ಹೋರಾಡುವುದು ನಮ್ಮ ಜಂಟಿ ಹೊಣೆಗಾರಿಕೆಯಾಗಿದೆ. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನ ಹೋರಾಟ ನಡೆಸಬೇಕು' ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ-ಜರ್ದಾರಿ ಹೇಳಿದರು. 'ರಾಜತಾಂತ್ರಿಕವಾಗಿ ಮುನ್ನಡೆ ಕಾಯ್ದುಕೊಳ್ಳುವ ಉದ್ದೇಶದಿಂದ ಭಯೋತ್ಪಾದನೆ ವಿಷಯವನ್ನೇ ಒಂದು ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಬಾರದು' ಎಂದು ಪರೋಕ್ಷವಾಗಿ ಭಾರತವನ್ನು ಉದ್ದೇಶಿಸಿ ಹೇಳಿದರು. 'ಪಾಕಿಸ್ತಾನದ ಜನತೆ ಭಯೋತ್ಪಾದಕರ ದಾಳಿಗಳಿಂದ ಅತಿ ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಈ ಬಗ್ಗೆ ಮಾತನಾಡುವಾಗ ನಾನು ಪಾಕಿಸ್ತಾನದ ವಿದೇಶಾಂಗ ಸಚಿವನಾಗಿ ಮಾತ್ರವಲ್ಲ ಭಯೋತ್ಪಾದಕರ ಕೃತ್ಯಕ್ಕೆ ತನ್ನ ತಾಯಿಯನ್ನು ಕಳೆದುಕೊಂಡ ಮಗನಾಗಿಯೂ ಮಾತನಾಡುತ್ತೇನೆ' ಎಂದರು.
'ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಪ್ರಾದೇಶಿಕವಾಗಿ ಹಾಗೂ ಜಾಗತಿಕವಾಗಿ ನಡೆಯುತ್ತಿರುವ ಪ್ರಯತ್ನಗಳಿಗೆ ನನ್ನ ದೇಶ ಬದ್ಧವಾಗಿದೆ' ಎಂದೂ ಬಿಲಾವಲ್ ಭುಟ್ಟೊ ಹೇಳಿದರು. ಕಾಶ್ಮೀರ ಕುರಿತ ಭಾರತದ ನೀತಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು 'ಕೆಲ ದೇಶಗಳು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರ ಕ್ರಮಗಳಿಗೆ ಮುಂದಾಗುತ್ತಿವೆ. ಈ ನಡೆಗಳು ಅಂತರರಾಷ್ಟ್ರೀಯ ಕಾನೂನು ಮತ್ತು ಎಸ್‌ಸಿಒ ಉದ್ದೇಶಕ್ಕೆ ವ್ಯತಿರಿಕ್ತವಾಗಿವೆ' ಎಂದರು. 'ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್' (ಸಿಪಿಇಸಿ) ಯೋಜನೆಯನ್ನು ಬಿಲಾವಲ್ ಸಮರ್ಥಿಸಿಕೊಂಡರು.