ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಕಟ್ಟಡ ಉದ್ಘಾಟಿಸಿದ್ದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾಗತಿಸಿದ್ದಾರೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಮತ್ತು ಅಪಾರ ಸಂತೋಷದ ವಿಷಯ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸಂದೇಶ ಕಳುಹಿಸಿದ ರಾಷ್ಟ್ರಪತಿ ಮುರ್ಮು ಅವರು, ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯು ದೇಶದ ಇತಿಹಾಸದಲ್ಲಿ ಚಿನ್ನದ ಪದಗಳಲ್ಲಿ ಬರೆಯಲ್ಪಡುತ್ತದೆ ಎಂದು ಹೇಳಿದರು.
ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಲಿಲ್ಲವೆಂದು ಕೊಂಕು ತೆಗೆದು ಹಲವಾರು ವಿಪಕ್ಷಗಳು ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿವೆ. ಆದರೆ, ಈಗ ಸ್ವತಃ ರಾಷ್ಟ್ರಪತಿಯವರೇ ಉದ್ಘಾಟನಾ ಸಮಾರಂಭಕ್ಕೆ ತಮ್ಮ ಸಂದೇಶವನ್ನು ಕಳುಹಿಸಿ, ಪ್ರಧಾನಿಯವರು ಸಂಸತ್ ಭವನ ಉದ್ಘಾಟಿಸಿದ್ದು ಸ್ವಾಗತಾರ್ಹ ಎಂದು ಹೇಳಿರುವುದು ಗಮನಾರ್ಹ.
"ಹೊಸ ಸಂಸತ್ ಕಟ್ಟಡದ ಉದ್ಘಾಟನೆಯು ಭಾರತದ ಸಮಸ್ತ ಜನತೆಗೆ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ" ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿಯವರ ಸಂದೇಶವನ್ನು ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ಓದಿದರು.
ಸಂಸತ್ತು ದೇಶಕ್ಕೆ ಮಾರ್ಗದರ್ಶನ ತೋರುವ ಬೆಳಕು, ಹೊಸ ಸಂಸತ್ತಿನ ಕಟ್ಟಡವು ನಮ್ಮ ಪ್ರಜಾಪ್ರಭುತ್ವದ ಪಯಣದಲ್ಲಿ ಪ್ರಮುಖ ಮೈಲಿಗಲ್ಲು ಎಂದು ರಾಷ್ಟ್ರಪತಿಯವರು ಸಂದೇಶದಲ್ಲಿ ತಿಳಿಸಿದ್ದಾರೆ.