ನವದೆಹಲಿ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಬಿಂಬಿಸಿದ್ದ ನಕಲಿ ವಿಡಿಯೊ ಹಂಚಿಕೊಂಡಿರುವ ಪ್ರಕರಣದಲ್ಲಿ ತಮ್ಮ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅಡಿ ದೂರು ದಾಖಲಿಸಿಕೊಂಡಿರುವುದನ್ನು ರದ್ದುಪಡಿಸಲು ಕೋರಿ ಬಂಧಿತ ಯೂಟ್ಯೂಬರ್ ಮನೀಷ್ ಕಶ್ಯಪ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
'ನಿಮಗೊಂದು ಸುಭದ್ರವಾದ ರಾಜ್ಯವಿದ್ದು, ಆ ರಾಜ್ಯದಲ್ಲಿ ನೀವು ಗೊಂದಲ ಸೃಷ್ಟಿಸಿ, ಏನನ್ನಾದರೂ ಹಂಚಿಕೊಳ್ಳಬಹುದೇ?' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರಶ್ನಿಸಿದರು.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ಎನ್‌ಎಸ್‌ಎಗೆ ಸಂಬಂಧಿಸಿದ ಮನವಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಕಶ್ಯಪ್ ಅವರಿಗೆ ಅವಕಾಶವನ್ನು ನೀಡಿತು. ಅಂತೆಯೇ, ಅವರ ವಿರುದ್ಧದ ಎಲ್ಲಾ 19 ಎಫ್‌ಐಆರ್‌ಗಳನ್ನು ಬಿಹಾರಕ್ಕೆ ವರ್ಗಾಯಿಸುವ ಮನವಿಯನ್ನು ತಿರಸ್ಕರಿಸಿತು.
ಸದ್ಯ ತಮಿಳುನಾಡಿನ ಮದುರೈ ಜೈಲಿನಲ್ಲಿರುವ ಕಶ್ಯಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರ ಮನವಿಗಳನ್ನು ತಿರಸ್ಕರಿಸಿದ ಪೀಠವು, 'ನಾವು ಮನವಿಯನ್ನು ಪರಿಗಣಿಸಲು ಒಲವು ಹೊಂದಿಲ್ಲ' ಎಂದೂ ಹೇಳಿತು.
ಎನ್‌ಎಸ್‌ಎ ಅಡಿಯಲ್ಲಿ ಕಶ್ಯಪ್ ಅವರ ಬಂಧನವನ್ನು ರದ್ದುಗೊಳಿಸಲು ನಿರಾಕರಿಸಿದ ಪೀಠ, ಈ ರೀತಿಯ ಅರ್ಜಿಯನ್ನು ಆಲಿಸಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿತು.
ಆರೋಪಿ ಮನೀಷ್ ಮಾರ್ಚ್ 18ರಂದು ಬಿಹಾರದ ಜಗದೀಶ್‌ಪುರ ಪೊಲೀಸ್ ಠಾಣೆಗೆ ಶರಣಾಗಿದ್ದರು. ಬಳಿಕ ಅವರನ್ನು ತಮಿಳುನಾಡಿಗೆ ಕರೆಯೊಯ್ಯಲಾಗಿತ್ತು. ಅಲ್ಲಿ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.