ನವದೆಹಲಿ: 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡುವಾಗ ಎಫ್‌ಐಆರ್‌ನಲ್ಲಿ ಅಲ್ಲದಿದ್ದರೂ ಆರೋಪ ಪಟ್ಟಿಯಲ್ಲಾದರೂ ವ್ಯಕ್ತಿಯ ವಿರುದ್ಧದ ಎಲ್ಲ ಆರೋಪಗಳನ್ನು ವಿವರಿಸಬೇಕು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.

'ಹೀಗೆ ವ್ಯಕ್ತಿಯ ವಿರುದ್ಧ ಆರೋಪಗಳನ್ನು ವಿವರಿಸಿದರೆ, ಪ್ರಕರಣದ ವಿಚಾರಣೆ ನಡೆಸಬೇಕೊ ಬೇಡವೊ ಎನ್ನುವುದನ್ನು ನಿರ್ಧರಿಸಲು ಅನುಕೂಲವಾಗಲಿದೆ. ಜೊತೆಗೆ, ಈ ಪ್ರಕರಣವು ಈ ಕಾಯ್ದೆಯಡಿ ಬರುತ್ತದೊ ಇಲ್ಲವೊ ಎನ್ನುವುದನ್ನೂ ತಿಳಿಯಬಹುದು' ಎಂದು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು ಹೇಳಿದೆ.
'ಪರಿಶಿಷ್ಟ ಜಾತಿ ಅಥವಾ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಮೂರ್ಖ, ಕಳ್ಳ ಅಥವಾ ಮುಟ್ಠಾಳ ಎಂದಾಕ್ಷಣ ಅದು ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ. ಜಾತಿ ಸೂಚಕ ನಿಂದನೆಗಳು ಮಾತ್ರವೇ ಈ ಕಾಯ್ದೆ ಅಡಿ ಬರುತ್ತವೆ' ಎಂದು ಪೀಠ ಹೇಳಿದೆ.
'ಪರಿಶಿಷ್ಟ ಸಮುದಾಯಗಳಿಗೆ ಸೇರದ ಇತರೆ ಸಮುದಾಯದ ವ್ಯಕ್ತಿಗಳನ್ನು ಮೂರ್ಖ, ಮುಟ್ಠಾಳ ಅಥವಾ ಕಳ್ಳ ಎಂದು ಸಾರ್ವಜನಿಕವಾಗಿ ಕರೆದರೆ, ಅದು ಮಾನಹಾನಿ ಪ್ರಕರಣದ ಅಡಿ ಬರುತ್ತದೆ' ಎಂದು ನ್ಯಾಯಾಲಯ ಹೇಳಿತು.
2022 ಮೇ 23ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಮೇಶ್ ಚಂದ್ರ ವೈಶ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ಅಭಿಪ್ರಾಯಟ್ಟಿದೆ. ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದು ಮಾಡಬೇಕು ಎಂದು ಕೋರಿ ರಮೇಶ್ ಅವರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು.