ಕಾಸರಗೋಡು: ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಸರ್ಕಾರಕ್ಕೆ ಭ್ರಷ್ಟಾಚಾರ ಒಂದೇ ಸಾಧನೆಯಾಗಿದ್ದು, ಎಡರಂಗ ಆಡಳಿತ ರಾಜ್ಯವನ್ನು ಅಧೋಗತಿಯೆಡೆಗೆ ತಳ್ಳಿರುವುದಾಗಿ ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ಆರೋಪಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಗೆ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ರಾಜ್ಯದ 20ಲಕ್ಷ ಮನೆಗಳಿಗೆ ಕೆ-ಫೋನ್ ಸೌಲಭ್ಯ ಒದಗಿಸಿಕೊಡುವ ಭರವಸೆಯೊಂದಿಗೆ ಜಾರಿಗೆ ತರಲಾದ ಕೆ-ಫೋನ್ ಯೋಜನೆಯಲ್ಲಿ ಬಹುಕೋಟಿ ಹಗರಣ ನಡೆದಿದ್ದರೆ, ರಸ್ತೆ ಅಂಚಿಗೆ ಎಐ ಕ್ಯಾಮರಾ ಅಳವಡಿಸುವ ಯೋಜನೆಯಲ್ಲೂ ಭಾರಿ ಅವ್ಯವಹಾರ ನಡೆಸಲಾಗಿದೆ. 1028ಕೋಟಿ ಮೊತ್ತದೊಂದಿಗೆ ಆರಂಭಗೊಂಡ ಕೆ-ಫೋನ್ ಯೋಜನೆ 1528ಕೋಟಿಗೆ ಏರಿಕೆಯಾಗಿದ್ದು, ಶೇ.50ರಷ್ಟು ಹೆಚ್ಚಿನ ಮೊತ್ತಕ್ಕೆ ಟೆಂಡರ್ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ. ಎಐ ಕ್ಯಾಮರಾ ಅಳವಡಿಕೆ ಯೋಜನೆಯಲ್ಲಿ ವೃತ್ತಿಪರಿಚಯವಿಲ್ಲದ ಸಂಸ್ಥೆಗಳಿಗೆ ಗುತ್ತಿಗೆ ವಹಿಸಿಕೊಡುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ. ಕೇರಳದಲ್ಲಿ ನಡೆಯುತ್ತಿರುವ ಪ್ರತಿಯೊಂದು ಭ್ರಷ್ಟಾಚಾರದಲ್ಲೂ ಪಿ. ಶಿವಶಂಕರನ್ ಐಎಎಸ್ ಅವರ ಹೆಸರು ತಳಕುಹಾಕಿಕೊಳ್ಳುತ್ತಿದೆ. ಪ್ರತಿಯೊಂದು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಪ್ರತಿಪಕ್ಷ ಸಲ್ಲಿಸುತ್ತಾ ಬಂದಿದ್ದರೂ, ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಇವುಗಳಿಗೆ ಉತ್ತರಿಸಲು ಮುಂದಾಗದಿರುವುದು ಸಂಶಯಕ್ಕೆ ಕಾರಣವಾಗಿದೆ. ಕೇರಳ ರಾಜ್ಯ ಕಂಡರಿಯದ ಭ್ರಷ್ಟಾಚಾರಗಳಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚುಕ್ಕಾಣಿ ಹಿಡಿಯುತ್ತಿರುವುದು ಈಗಾಗಲೇ ಸಾಬೀತಾಗಿದೆ. ಎಲ್ಲ ಭ್ರಷ್ಟಾಚಾರ ಬಯಲಿಗೆಳೆಯಬೇಕಾದರೆ ನ್ಯಾಯಾಂಗ ತನಿಖೆಯೊಂದೇ ಪರಿಹಾರ ಎಂದು ತಿಳಿಸಿದರು.
ಐಕ್ಯರಂಗ ಮುಖಂಡರಾದ ಎಂ.ಎಂ ಹಸನ್, ಸಿ.ಟಿ ಅಹಮ್ಮದಾಲಿ, ಪಿ.ಎ ಫೈಸಲ್, ಕೆ. ನೀಲಕಂಠನ್, ಸಂಸದ ರಆಜ್‍ಮೋಹನ್ ಉನ್ಣಿತ್ತಾನ್, ಶಾಸಕ ಎನ್.ಎ ನೆಲ್ಲಿಕುನ್ನು ಮುಂತಾದವರು ಸಉದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.