ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸ ತುಂಬಾ ಜನರಿಗಿದೆ. ಕೆಲವರಿಗಂತೂ ಕಾಫಿ ಇಲ್ಲದೇ ಜೀವನವೇ ಇಲ್ಲ. ಬೆಳ್ಳಂ ಬೆಳಗ್ಗೆ ಒಂದು ಕಪ್ ಕಾಫಿ ಕುಡಿಯೋದ್ರಲ್ಲಿ ಸಿಗುವ ಸಮಾಧಾನ ಬೇರ್ಯಾವುದ್ರಲ್ಲೂ ಸಿಗೋದೇ ಇಲ್ಲ. ನಿಜ ಹೇಳ್ಬೇಕಂದ್ರೆ ಕಾಫಿ ಕುಡಿಯೋದ್ರಿಂದ ನಮಗೆ ಅನೇಕ ರೀತಿ ಪ್ರಯೋಜನಗಳು ಇದೆ.
ಖಿನ್ನತೆಯನ್ನು ಕಡಿಮೆ ಮಾಡೋದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರವಿದೆ. ಆದ್ರೆ ಖಾಲಿ ಹೊಟ್ಟೆಗೆ ಕಾಫಿ ಸೇವಿಸೋದ್ರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಂತೆ. ಅಷ್ಟಕ್ಕು ಏನ್ನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ ಅನ್ನೋದನ್ನು ತಿಳಿಯೋಣ.
1. ಅಜೀರ್ಣ ಹಾಗೂ ಎದೆಯುರಿ ಉಂಟಾಗುತ್ತದೆ
ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸ ಒಳ್ಖೆಯದಲ್ಲ. ಯಾಕಂದ್ರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆ ತಂದೊಡ್ಡಬಹುದು. ಅಷ್ಟೇ ಅಲ್ಲ, ಇದರಿಂದ ನಿಮ್ಮ ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆ ಶುರುವಾಗುತ್ತದೆ. ಈ ಆಮ್ಲವು ನಿಮ್ಮ ಹೊಟ್ಟೆಯ ಒಳಪದರವನ್ನು ಹಾನಿಗೊಳಿಸುತ್ತದೆ ಮತ್ತು ಅಜೀರ್ಣ ಮತ್ತು ಎದೆಯುರಿ ಉಂಟುಮಾಡಬಹುದು. ಹೀಗಾಗಿ ಈ ಅಭ್ಯಾಸ ಒಳ್ಳೆಯದಲ್ಲ. ಇಂದೇ ಬಿಟ್ಟು ಬಿಡಿ. ಬೆಳಗ್ಗಿನ ತಿಂಡಿ ಆದ ಮೇಲೆ ಬೇಕಾದರೆ ಕಾಫಿ ಕುಡಿಯಿರಿ.
2. ಕಾರ್ಟಿಸೋಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ನಿಮ್ಮ ಜೈವಿಕ ಗಡಿಯಾರದ ಸಮಯ ತಪ್ಪಿ ಹೋಗುತ್ತದೆ. ಯಾಕಂದ್ರೆ ನಿಮ್ಮ ದೇಹವು ಬೆಳಿಗ್ಗೆ ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮನ್ನು ಜಾಗರೂಕರಾಗಿಡುವುದು ಮಾತ್ರವಲ್ಲದೇ, ನಿಮಗೆ ಚೈತನ್ಯವನ್ನು ನೀಡುತ್ತದೆ. ಖಾಲಿ ಹೊಟ್ಟೆಗೆ ಕಾಫಿ ಕುಡಿದರೆ ನಿಮ್ಮ ಕಾರ್ಟಿಸೋಲ್ ಮಟ್ಟ ಕಡಿಮೆಯಾಗುತ್ತದೆ.
3. ಪ್ರಮುಖ ಖನಿಜಗಳನ್ನು ವಿಸರ್ಜನೆಗೊಳಿಸುತ್ತದೆ
ನಮ್ಮ ದೇಹಕ್ಕೆ ಎಲ್ಲಾ ಪೋಷಕಾಂಶಗಳು ಹೇಗೆ ಮುಖ್ಯವೋ ಅದೇ ರೀತಿ ಖನಿಜಗಳು ಕೂಡ ಅಷ್ಟೇ ಮುಖ್ಯವಾಗಿದೆ. ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿಯುವುದರಿಂದ ಮೂತ್ರ ವಿಸರ್ಜನೆಯ ಮೂಲಕ ದೇಹದ ಪ್ರಮುಖ ಖನಿಜಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಾಫಿಯು ದೇಹದಿಂದ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಆರೋಗ್ಯ ದೃಷ್ಟಿಯಿಂದ ಇದು ಖಂಡಿತ ಒಳ್ಳೆಯದಲ್ಲ.
4. ದೇಹಕ್ಕೆ ಪೋಷಕಾಂಶ ಸಿಗೋದಿಲ್ಲ, ಕ್ಯಾಲೊರಿ ಹೆಚ್ಚಾಗುತ್ತದೆ
ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಕಾಫಿ ಕುಡಿಯುತ್ತೀವಿ. ಆ ಕಾಫಿಯು ಸಕ್ಕರೆ, ಕೆಫಿನ್ ಹಾಗೂ ಕ್ಯಾಲೊರಿಯಿಂದ ತುಂಬಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಜೊತೆಗೆ ಅನೇಕರಿಗೆ ಕಾಫಿ ಕುಡಿದ ತಕ್ಷಣ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ ಬೆಳಗ್ಗಿನ ಉಪಹಾರವನ್ನೂ ಮಾಡೋದಿಲ್ಲ. ಇದರಿಂದ ನಮ್ಮ ದೇಹ ಪೋಷಕಾಂಶಗಳ ಕೊರತೆಯನ್ನು ಅನುಭವಿಸುತ್ತದೆ. ಪ್ರತಿ ನಿತ್ಯ ಇದೇ ದಿನಚರಿಯನ್ನು ಅನುಸರಿಸಿದರೆ ನಮ್ಮ ದೇಹ ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ.
5. ಆತಂಕ ಹೆಚ್ಚಾಗುತ್ತದೆ
ಈ ಮಾರ್ಡನ್ ಯುಗದಲ್ಲಂತೂ ಅನೇಕ ಜನರನ್ನು ಆತಂಕ ಹೆಚ್ಚಾಗಿ ಕಾಡುತ್ತಿದೆ. ಅದ್ರಲ್ಲೂ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ನಿಮಗೆ ಆತಂಕದ ಸಮಸ್ಯೆ ಹೆಚ್ಚಾಗುತ್ತಂತೆ. ನೀವು ಯಾವ ಕಾರಣಕ್ಕಾಗಿ ಒದ್ದಾಟ ನಡೆಸುತ್ತಿದ್ದೀರಿ ಆ ಒದ್ದಾಟ ಮತ್ತಷ್ಟು ಹೆಚ್ಚಾಗುತ್ತಂತೆ. ಇದು ಆತಂಕವನ್ನು ಇನ್ನಷ್ಟು ಹದಗೆಡಿಸುತ್ತದೆ. ಮತ್ತು ಆತಂಕದ ದಾಳಿಯನ್ನು ಮತ್ತಷ್ಟು ಪ್ರಚೋದಿಸಬಹುದು ಎಂದು ಅಧ್ಯಯನಗಳು ಸಾಭೀತು ಪಡಿಸಿದೆ.
6. ನಿರ್ವಿಶೀಕರಣವನ್ನು(detoxification) ತಡೆಯುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಗೆ ಕಾಫಿ ಕುಡಿಯುವುದರಿಂದ ಯಕೃತ್ತಿನಲ್ಲಿ ಸಾಮಾನ್ಯ ನಿರ್ವಿಶೀಕರಣ ಪ್ರಕ್ರಿಯೆಯನ್ನು ನಿಯಂತ್ರಿಸಲು ಸಾಧ್ಯವಾಗೋದಿಲ್ಲ. ನಿಮ್ಮ ದೈಹಿಕ ವ್ಯವಸ್ಥೆಯಿಂದ ಕಾಫಿ ಮತ್ತು ಕೆಫೀನ್ ಅನ್ನು ಸುರಕ್ಷಿತವಾಗಿ ತೆಗೆದುಹಾಕಿ. ಅಂದ್ರೆ ಈ ಪಾನೀಯಗಳನ್ನು ಕುಡಿಯುವುದನ್ನು ನಿಲ್ಲಿಸಿರಿ. ಖಂಡಿತ ನೀವು ಅಧಿಕ ಶಕ್ತಿಯನ್ನು ಪಡೆದುಕೊಳ್ಳುತ್ತೀರಿ. ನಿಮ್ಮಲ್ಲಿ ಯಾವಾಗಲೂ ಒಂದು ರೀತಿ ಚೈತನ್ಯ ತುಂಬಿರುತ್ತದೆ.
7. ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಗೆ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಎಷ್ಟು ಕೆಟ್ಟದು ಅಂದ್ರೆ ಬೆಳಗ್ಗೆ ಸಕ್ಕರೆ ಪ್ರಮಾಣ ನಮ್ಮ ದೇಹದೊಳಗೆ ಹೋಗೋದ್ರಿಂದ ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ನಿಮ್ಮ ಜೀವಕೋಶಗಳಿಗೆ ಕಷ್ಟಕರವಾಗಿಸುತ್ತದೆ. ಇದರಿಂದ ಅಪಧಮನಿಯ ಕ್ಷೀಣತೆ ಉಂಟಾಗುವ ಸಾಧ್ಯತೆ ಇದೆ. ಇನ್ನೂಹೃದಯ ರಕ್ತನಾಳದ ಕಾಯಿಲೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮರಣ ಸಂಭವಿಸುವ ಸಾಧ್ಯತೆ ಕೂಡ ಇದೆ.
ಖಾಲಿ ಹೊಟ್ಟೆಗೆ ಕಾಫಿ ಕುಡಿಯೋದ್ರಿಂದ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿದೆ. ಹೀಗಾಗಿ ಕಾಫಿ ಕುಡಿಯುವ ಮೊದಲು ಹೊಟ್ಟೆಗೆ ಏನಾದರೂ ತಿಂದು ನಂತರ ಕಾಫಿ ಕುಡಿಯಿರಿ. ಇನ್ನೂ ಅತಿಯಾದ ಪ್ರಮಾಣದಲ್ಲಿ ಕಾಫಿ ಕುಡಿಯೋದು ಒಳ್ಳೆಯದಲ್ಲ. ಇದ್ರಿಂದ ಕೂಡ ಆಪಾಯವಿದೆ.