ನವದೆಹಲಿ::ತನಿಖಾ ಸಂಸ್ಥೆಯು ಅಪೂರ್ಣ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದರೆ ಆರೋಪಿಯು ಡಿಫಾಲ್ಟ್ ಜಾಮೀನು (ಕಡ್ಡಾಯವಾಗಿ ಲಭಿಸುವ ಜಾಮೀನು) ಪಡೆಯಲು ಅರ್ಹನಾಗಿರುತ್ತಾನೆ ಎಂಬ ತನ್ನ ತೀರ್ಪಿನ ಸಿಂಧುತ್ವವನ್ನು ಪರಿಶೀಲಿಸಲು ಮೂವರು ನ್ಯಾಯಾಧೀಶರ ಪೀಠವನ್ನು ರಚಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿಳಿಸಿದೆ.
ತೀರ್ಪಿನ ಆಧಾರದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮೇ 4ರ ನಂತರ ಯಾವುದೇ ದಿನಾಂಕಕ್ಕೆ ಮುಂದೂಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಜೆ.ಬಿ.ಪರ್ದಿವಾಲಾ ಅವರ ಪೀಠವು ನ್ಯಾಯಾಲಯಗಳಿಗೆ ಸೂಚಿಸಿತು.
ಸಿಆರ್ಪಿಸಿಯಡಿ ಡಿಫಾಲ್ಟ್ ಜಾಮೀನು ಒಂದು ಪ್ರಮುಖ ಹಕ್ಕು ಆಗಿದ್ದು,ತನಿಖಾ ಸಂಸ್ಥೆಗಳು ಇನ್ನೂ ತನಿಖೆ ಪೂರ್ಣಗೊಳ್ಳದ ಪ್ರಕರಣಗಳಲ್ಲಿ ಪೂರಕ ದೋಷಾರೋಪ ಪಟ್ಟಿಗಳನ್ನು ಸಲ್ಲಿಸುವ ಮೂಲಕ ಅದನ್ನು ತಡೆಯುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಸಿ.ಟಿ.ರವಿಕುಮಾರ ಅವರ ಪೀಠವು ತನ್ನ ಎ.25ರ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.
ರಿತು ಛಾಬ್ರಿಯಾ ಎನ್ನುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪು ಹೊರಬಿದ್ದಿತ್ತು. ಛಾಬ್ರಿಯಾರ ಪತಿ ಸಂಜಯ ಛಾಬ್ರಿಯಾರನ್ನು ಭ್ರಷ್ಟಾಚಾರ ಕಾಯ್ದೆಯಡಿ ಬಂಧಿಸಲಾಗಿತ್ತು ಮತ್ತು ಆರಂಭದಲ್ಲಿ ಅವರನ್ನು ಪ್ರಕರಣದಲ್ಲಿ ಹೆಸರಿಸಿರಲಿಲ್ಲ.
ಕಳೆದ ವರ್ಷದ ಎಪ್ರಿಲ್ನಲ್ಲಿ ಛಾಬ್ರಿಯಾರನ್ನು ಬಂಧಿಸಿದ್ದ ಸಿಬಿಐ,ಪೂರಕ ದೋಷಾರೋಪ ಪಟ್ಟಿಯಲ್ಲಿ ಅವರನ್ನು ಶಂಕಿತ ಆರೋಪಿಯೆಂದು ಹೆಸರಿಸಿತ್ತು. ಆದರೆ ಅಂತಿಮ ದೋಷಾರೋಪ ಪಟ್ಟಿಯನ್ನು ಸಿಬಿಐ ಸಲ್ಲಿಸಿರಲಿಲ್ಲ.
ಪ್ರಕರಣದಲ್ಲಿ ತನಿಖೆಯನ್ನು ಪೂರ್ಣಗೊಳಿಸದೆ ಸಿಆರ್ಪಿಸಿಯ ಕಲಂ 167 (2)ರಡಿ ಡಿಫಾಲ್ಟ್ ಜಾಮೀನು ಪಡೆಯುವ ತನ್ನ ಹಕ್ಕಿನಿಂದ ಆರೋಪಿಯನ್ನು ವಂಚಿತಗೊಳಿಸಲೆಂದೇ ದೋಷಾರೋಪ ಪಟ್ಟಿ ಅಥವಾ ಪ್ರಾಸಿಕ್ಯೂಷನ್ ದೂರನ್ನು ಸಲ್ಲಿಸುವಂತಿಲ್ಲ ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿತ್ತು.
ತೀರ್ಪಿನ ಆಧಾರದಲ್ಲಿ ಡಿಫಾಲ್ಟ್ ಜಾಮೀನು ಕೋರಿ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸೋಮವಾರ ಮು.ನ್ಯಾ.ಚಂದ್ರಚೂಡ್ ಅವರಿಗೆ ತಿಳಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ತೀರ್ಪು ತನಿಖಾ ಸಂಸ್ಥೆಗಳ ಪಾಲಿಗೆ,ವಿಶೇಷವಾಗಿ ಅಕ್ರಮ ಹಣ ಪ್ರಕರಣಗಳ ತನಿಖೆಗಳಿಗೆ ದೀರ್ಘ ಸಮಯ ಮತ್ತು ಹಲವಾರು ದೋಷಾರೋಪ ಪಟ್ಟಿಗಳ ಸಲ್ಲಿಕೆಯು ಅಗತ್ಯವಾಗಿರುವ ಜಾರಿ ನಿರ್ದೇಶನಾಲಯಕ್ಕೆ ಗೊಂದಲವನ್ನು ಸೃಷ್ಟಿಸುತ್ತದೆ ಎಂದು ವಾದಿಸಿದರು.
ಎ.25ರ ತೀರ್ಪು ಸರ್ವೋಚ್ಚ ನ್ಯಾಯಾಲಯದ ಹಿಂದಿನ ಮೂರು ತೀರ್ಪುಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ ಎಂದು ವಾದಿಸಿದ ಮೆಹ್ತಾ,ದೋಷಾರೋಪ ಪಟ್ಟಿಯ ಸಲ್ಲಿಕೆಯೊಂದಿಗೆ ಆರೋಪಿಯ ಡಿಫಾಲ್ಟ್ ಜಾಮೀನಿನ ಹಕ್ಕು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಈ ತೀರ್ಪುಗಳಲ್ಲೊಂದು ಎತ್ತಿ ಹಿಡಿದಿತ್ತು ಎಂದು ಹೇಳಿದರು.
ಸಿಆರ್ಪಿಸಿ,1973ರ ಕಲಂ 167(2)ರಡಿ ಓರ್ವ ಆರೋಪಿಯನ್ನು ನಿರ್ದಿಷ್ಟ ಅವಧಿಗೆ ಮಾತ್ರ ಬಂಧನದಲ್ಲಿ ಇರಿಸಬಹುದು. ಈ ಅವಧಿಯ ಬಳಿಕ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಸದಿದ್ದರೆ ಆರೋಪಿಗೆ ಜಾಮೀನು ನೀಡಲಾಗುತ್ತದೆ. ಈ ಕಲಮ್ನಡಿ ಜಾಮೀನನ್ನು ಡಿಫಾಲ್ಟ್ ಜಾಮೀನು ಅಥವಾ ಕಡ್ಡಾಯ ಜಾಮೀನು ಎಂದು ಉಲ್ಲೇಖಿಸಲಾಗುತ್ತದೆ.