ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಲು ದೆಹಲಿಗೆ ಆಗಮಿಸಿರುವ ಹಲವಾರು ರೈತರು ಬ್ಯಾರಿಕೇಡ್‌ಗಳನ್ನು ದಾಟಿ ಪ್ರತಿಭಟನೆ ಸ್ಥಳಕ್ಕೆ ಹೋಗಲು ಪ್ರಯತ್ನಿಸಿರುವ ಘಟನೆ ಸೋಮವಾರ ನಡೆದಿದೆ.

ಈ ವೇಳೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರೈತರು ಬ್ಯಾರಿಕೇಡ್‌ಗಳನ್ನು ದಾಟಲು ಮತ್ತು ಅವನ್ನು ಪಕ್ಕಕ್ಕೆ ಎಳೆಯಲು ಪ್ರಯತ್ನಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ತೆರಳಲು ಕೆಲ ರೈತರು ಧಾವಂತ ತೋರಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ರೈತರನ್ನು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ಬೆಂಗಾವಲಿನಲ್ಲಿ ಕರೆದೊಯ್ಯಲಾಯಿತು. ಬಳಿಕ, ಪ್ರತಿಭಟನನಿರತರ ಸಭೆ ಶಾಂತಿಯುತವಾಗಿ ನಡೆಯಿತು ಎಂದು ದೆಹಲಿಯ ಡಿಸಿಪಿ ಪ್ರಣವ್ ತಯಾಲ್ ತಿಳಿಸಿದ್ದಾರೆ.
ಪ್ರತಿಭಟನೆ ಸ್ಥಳದಲ್ಲಿ ಘರ್ಷಣೆ ಸಂಭವಿಸಿದೆ ಎಂದು ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಅಧಿಕೃತ ಟ್ವಿಟರ್ ಖಾತೆ ಟ್ವೀಟ್ ಮಾಡಿದೆ. 'ಸುಳ್ಳು ಸುದ್ದಿಗಳನ್ನು ನಂಬದಂತೆ ಎಲ್ಲರಲ್ಲೂ ಮನವಿ ಮಾಡುತ್ತೇವೆ. ರೈತರಿಗೆ ಜಂತರ್ ಮಂತರ್ ಪ್ರವೇಶಿಸಲು ಲೋಹ ಶೋಧಕ ಬಾಗಿಲುಗಳ ಮೂಲಕ ಅನುವು ಮಾಡಿದ್ದೇವೆ. ಎಲ್ಲರೂ ಶಾಂತಿ ಕಾಯ್ದುಕೊಳ್ಳಿ ಮತ್ತು ಕಾನೂನಿಗೆ ಬದ್ಧರಾಗಿರಿ' ಎಂದು ಮನವಿ ಮಾಡಿದೆ.
ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕುಸ್ತಿಪಟುಗಳು ಏಪ್ರಿಲ್ 23ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಸೇರಿ ಹಲವು ರೈತ ಸಂಘಟನೆಗಳು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿವೆ.