ಗುವಾಹಟಿ: ಅಸ್ಸಾಂ ಸರ್ಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆಯನ್ನು ಬುಧವಾರ ಪ್ರಾರಂಭಿಸಿದೆ.
ಈ ಮೂಲಕ ಸರಳವಾಗಿ ಆರೋಗ್ಯ ಯೋಜನೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.
ಸರ್ಕಾರ ಎರಡು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 'ಆಯುಷ್ಮಾನ್ ಅಸೋಮ್ - ಮುಖ್ಯ ಮಂತ್ರಿ ಜನ್ ಆರೋಗ್ಯ ಯೋಜನೆ'ಯನ್ನು ಪ್ರಾರಂಭಿಸಿದ್ದಾರೆ.
'ಆಯುಷ್ಮಾನ್ ಅಸೋಮ್' ಯೋಜನೆಯ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಪಟ್ಟಿ ಮಾಡಲ್ಪಟ್ಟವರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಈ ಯೋಜನೆಯು ರಾಜ್ಯದಲ್ಲಿ ಪಟ್ಟಿ ಮಾಡಲಾದ 300ಕ್ಕೂ ಆಸ್ಪತ್ರೆಗಳಲ್ಲಿ 1,578 ವೈದ್ಯಕೀಯ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ.
ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯು 'ಆರಂಭದಲ್ಲಿ ಸರಿಸುಮಾರು 26 ಲಕ್ಷ ಕುಟುಂಬಗಳನ್ನು ಒಳಗೊಂಡಿದ್ದು, ಹಂತ ಹಂತವಾಗಿ 32 ಲಕ್ಷಕ್ಕೆ ಹೆಚ್ಚಿಸಲಾಗುವುದು' ಎಂದು ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಉನ್ನತಿ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು 'ಅಂತ್ಯೋದಯ'ದ ನಿರಂತರ ಅನ್ವೇಷಣೆಯು 'ಮುಖ್ಯ ಮಂತ್ರಿ ಜನ ಆರೋಗ್ಯ ಯೋಜನೆ'ಯ ಹಿಂದಿನ ಪ್ರೇರಕ ಅಂಶವಾಗಿದೆ ಎಂದು ಹೇಳಿದರು.
ಕೆಲವು ಮಿತಿಗಳ ಕಾರಣದಿಂದಾಗಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಅನೇಕ ಕುಟುಂಬಗಳು 'ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ'ಯಿಂದ ಹೊರಗುಳಿದಿವೆ, ಹೊಸ ಯೋಜನೆಯು ಹೊರಗುಳಿದ ಕುಟುಂಬಗಳಿಗೆ ಅದೇ ರೀತಿಯ ನಗದು ರಹಿತ ಆರೋಗ್ಯ ಪ್ರಯೋಜನಗಳನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
ಅಟಲ್ ಅಮೃತ್ ಅಭಿಯಾನ್ ಸೊಸೈಟಿಯು ಹೊಸ ಯೋಜನೆಯ ದೈನಂದಿನ ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ಶರ್ಮಾ ಉಲ್ಲೇಖಿಸಿದ್ದಾರೆ.
ಆರೋಗ್ಯ ಕ್ಷೇತ್ರದ ಸುಧಾರಣೆಯು ತಮ್ಮ ಸರ್ಕಾರದ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.
ಆಗಸ್ಟ್ 15 ರಿಂದ ಅಸ್ಸಾಂ ಸರ್ಕಾರದ ಉದ್ಯೋಗಿಗಳಿಗೆ ಆರೋಗ್ಯ ಯೋಜನೆಯಾದ 'ಮುಖ್ಯ ಮಂತ್ರಿ ಲೋಕ ಸೇವಾ ಆರೋಗ್ಯ ಯೋಜನೆ'ಯನ್ನು ಬಿಡುಗಡೆ ಮಾಡುವುದಾಗಿ ಶರ್ಮಾ ಘೋಷಿಸಿದರು.