ರಾಷ್ಟ್ರಪತಿ ದ್ರೌಪದಿ ಮುರ್ಮು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿ ಭಾರತದ ಮೊದಲ ಕ್ಲೋನ್ ಸಂತಾನೋತ್ಪತ್ತಿಯ ಗಿರ್ ಹಸು (Cloned Gir Cow) ಗಂಗಾವನ್ನು ಭೇಟಿಯಾದರು. ಭಾರತದ ಮೊದಲ ತದ್ರೂಪಿ ಗಿರ್ ಹಸು ಗಂಗಾ ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಜನ್ಮತಾಳಿದೆ.
ಕ್ಲೋನ್ ಸಂತಾನೋತ್ಪತ್ತಿ
ಹೈನುಗಾರಿಕೆ ಕ್ಷೇತ್ರದಲ್ಲಿ ತದ್ರೂಪಿ ಸಂತಾನೋತ್ಪತ್ತಿ ಒಂದು ಸಾಧನೆ ಎಂದೆನಿಸಿದ್ದು ದೇಶದ ಕ್ಷೀರ ಕ್ರಾಂತಿಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಎಂದೆನಿಸಿದೆ. ಕ್ಲೋನ್ (ತದ್ರೂಪಿ) ಸಂತಾನೋತ್ಪತ್ತಿಯ ಕುರಿತಾದ ಕೆಲವೊಂದು ಅಂಶಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಜಾನುವಾರುಗಳ ಸಂತಾನೋತ್ಪತ್ತಿಯಲ್ಲಿ ಇದರ ಪ್ರಯೋಜನಗಳೇನು ಎಂಬುದನ್ನು ಅರಿತುಕೊಳ್ಳೋಣ
ಮೊದಲ ತದ್ರೂಪಿ ಗಿರ್ ಕರು ಗಂಗಾ ಜನನ
ಕ್ಲೋನ್ ಸಂತಾನೋತ್ಪತ್ತಿಯ ಮೂಲಕ ಗಂಗಾ ಕರು ಮಾರ್ಚ್ 16 ರಂದು ಜನಿಸಿತು. ಸೊಮ್ಯಾಟಿಕ್ ಸೆಲ್ ನ್ಯೂಕ್ಲಿಯರ್ ಟ್ರಾನ್ಸ್‌ಫರ್ (SCNT) ಎಂದು ಕರೆಯಲ್ಪಡುವ ಪ್ರಕ್ರಿಯೆಯಿಂದ ಕ್ಲೋನ್ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ನಡೆಸಲಾಯಿತು.
ಈ ಪ್ರಕ್ರಿಯೆಯಲ್ಲಿ ಅಂಡಾಣುವಿನ ಕೋಶದಲ್ಲಿರುವ ಅನುವಂಶಿಕ ಅಂಶವನ್ನು ಇನ್ನೊಂದು ಕೋಶದ ಅನುವಂಶಿಕ ಅಂಶದೊಂದಿಗೆ ಬದಲಾಯಿಸಲಾಗುತ್ತದೆ.
ಕ್ಲೋನಿಂಗ್ ಪ್ರಕ್ರಿಯೆಯನ್ನು ವಿಜ್ಞಾನಿಗಳು ಹೇಗೆ ಕೈಗೊಂಡರು?
ಕ್ಲೋನಿಂಗ್ ಅನ್ನು ಕೈಗೊಳ್ಳಲು ವಿಜ್ಞಾನಿಗಳು ಮೊದಲಿಗೆ ಜೀವಂತ ಹಸುಗಳ ಅಂಡಾಣುಗಳನ್ನು ಸಂಗ್ರಹಿಸಿದರು ತದನಂತರ ಅಲ್ಟ್ರಾಸೌಂಡ್ ಗೈಡೆಡ್ ಸೂಜಿಗಳನ್ನು ಬಳಸಿ ಹಸುವಿನ ಅಂಡಾಶಯದಿಂದ ಮೊಟ್ಟೆಗಳನ್ನು ಹೊರತೆಗೆಯಲಾಯಿತು. 24 ಗಂಟೆಗಳ ಕಾಲ ಪ್ರಯೋಗಾಲಯದಲ್ಲಿ ಮೊಟ್ಟೆಗಳನ್ನಿರಿಸಲಾಯಿತು.
ಉತ್ತಮ ಹಸುಗಳಿಂದ ದೈಹಿಕ ಕೋಶಗಳನ್ನು ವಿಜ್ಞಾನಿಗಳು ಸಂಗ್ರಹಿಸಿದರು. ದೈಹಿಕ ಕೋಶಗಳೆಂದರೆ ದೇಹದ ಯಾವುದೇ ಭಾಗದಲ್ಲಿನ ಕೋಶಗಳಾಗಿವೆ ಚರ್ಮ ಅಥವಾ ಸ್ನಾಯುವಿನ ಕೋಶಗಳಂತೆ ಸಂತಾನೋತ್ಪತ್ತಿ ಮಾಡುವುದಿಲ್ಲ.
ಈ ಕೋಶಗಳು ಕ್ಲೋನ್ ಸಂತಾನೋತ್ಪತ್ತಿಗೆ ಅನುವಂಶಿಕ ಅಂಶಗಳನ್ನು ಒದಗಿಸಿವೆ. ವಿಜ್ಞಾನಿಗಳು ದೈಹಿಕ ಕೋಶದ ನ್ಯೂಕ್ಲಿಯಸ್ ಅನ್ನು ನ್ಯೂಕ್ಲಿಯೇಟೆಡ್ ಮೊಟ್ಟೆಯ ಕೋಶಕ್ಕೆ ಸ್ಥಳಾಂತರಿಸಿದರು. ನಂತರ ಅದರ ಆನುವಂಶಿಕ ವಸ್ತುವನ್ನು ತೆಗೆದುಹಾಕಲಾಯಿತು.
ವಿಜ್ಞಾನಿಗಳು ದೈಹಿಕ ಜೀವಕೋಶದ ನ್ಯೂಕ್ಲಿಯಸ್ ಅನ್ನು ನ್ಯೂಕ್ಲಿಯೇಟೆಡ್ ಮೊಟ್ಟೆಯ ಕೋಶದೊಂದಿಗೆ ಬೆಸೆದಿದ್ದು ನಂತರ ಕೋಶವನ್ನು ರಾಸಾಯನಿಕವಾಗಿ ಸಕ್ರಿಯಗೊಳಿಸಿದರು, ಇದನ್ನು ವಿಭಜಿಸಿದ ನಂತರ ಭ್ರೂಣವಾಗಿ ಬೆಳೆಯಲು ಸಾಧ್ಯವಾಯಿತು ನಂತರ ಭ್ರೂಣಗಳನ್ನು ವಿಟ್ರೊದಲ್ಲಿ (ಸಾಮಾನ್ಯವಾಗಿ ಪರೀಕ್ಷಾ ಟ್ಯೂಬ್‌ನಲ್ಲಿ) ಅಭಿವೃದ್ಧಿಗೊಳಿಸಲಾಯಿತು ನಂತರ ಅದನ್ನು ಪರ್ಯಾಯ ಹಸುಗಳಿಗೆ ಅಳವಡಿಸಲಾಯಿತು ಅಂತೆಯೇ ಕ್ಲೋನ್ ಮಾಡಿದ ಗಿರ್ ಕರುವು ಜನ್ಮ ತಾಳಿತು.
ಜಾನುವಾರು ಕ್ಲೋನಿಂಗ್‌ನ ಪ್ರಯೋಜನಗಳೇನು?
ಕ್ಲೋನಿಂಗ್‌ನಿಂದ ಉತ್ತಮ ಹಸುಗಳ ತ್ವರಿತ ಸಂತಾನೋತ್ಪತ್ತಿಗೆ ಸಹಾಯಕವಾಗಿವೆ ಹಾಗೂ ಅಳಿವಿನಂಚಿನಲ್ಲಿರುವ ತಳಿಗಳ ಸಂರಕ್ಷಣೆಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಸ್ಥಳೀಯ ತಳಿಗಳ ಸಂಖ್ಯೆಯನ್ನು ಹೆಚ್ಚಿಸುವುದು
ದೇಶದಲ್ಲಿ ಸ್ಥಳೀಯ ತಳಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಗುರಿಯಾಗಿದೆ. NDRI-ಕರ್ನಾಲ್, ಉತ್ತರಾಖಂಡ್ ಜಾನುವಾರು ಅಭಿವೃದ್ಧಿ ಮಂಡಳಿ (ULDB), ಡೆಹ್ರಾಡೂನ್ ಸಹಭಾಗಿತ್ವದಲ್ಲಿ 2021 ರಲ್ಲಿ ಸ್ಥಳೀಯ ಹಸುಗಳಾದ ಗಿರ್, ಸಾಹಿವಾಲ್ ಮತ್ತು ರೆಡ್ ಶಿಂದಿಯಂತಹ ಕ್ಲೋನಿಂಗ್ ಸಂತಾನೋತ್ಪತ್ತಿಯ ಕೆಲಸವನ್ನು ಪ್ರಾರಂಭಿಸಿತು.
ಕ್ಲೋನಿಂಗ್ ಹಸು ಕೂಡ ಇತರ ಹಸುಗಳಂತೆಯೇ ಇರುತ್ತದೆ
ಹೆಚ್ಚು ಗುಣಮಟ್ಟದ ಜಾನುವಾರುಗಳೊಂದಿಗೆ, ಭಾರತವು ತನ್ನ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಗಮನಾರ್ಹವಾಗಿ, ಕ್ಲೋನಿಂಗ್ ಸಂತಾನೋತ್ಪತ್ತಿಯ ಮತ್ತು ಸಾಮಾನ್ಯ ಜಾನುವಾರುಗಳು ಒಂದೇ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ವಿದೇಶಗಳಿಗೆ ಗಿರ್ ಹಸುಗಳ ರಫ್ತು
ಗುಜರಾತಿನ ಸ್ಥಳೀಯ ತಳಿಯಾದ ಗಿರ್ ಹಸುಗಳು ಹೈನುಗಾರಿಕೆಯ ರೈತರಲ್ಲಿ ಜನಪ್ರಿಯವಾಗಿವೆ, ಏಕೆಂದರೆ ಇದು ವಿಧೇಯ ಸ್ವಭಾವ, ಉತ್ತಮ ಹಾಲು, ಒತ್ತಡವನ್ನು ನಿರ್ವಹಿಸುವ ಮತ್ತು ಹಲವಾರು ಉಷ್ಣವಲಯದ ಕಾಯಿಲೆಗಳಿಗೆ ನಿರೋಧಕವಾಗಿದೆ.
ಗಿರ್ ಜಾನುವಾರುಗಳನ್ನು ಬ್ರೆಜಿಲ್, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ ಮತ್ತು ವೆನೆಜುವೆಲಾಕ್ಕೂ ರಫ್ತು ಮಾಡಲಾಗಿದೆ. ಅಭಿವೃದ್ಧಿಪಡಿಸಿದ ಸ್ಥಳೀಯ ತಂತ್ರವು ಭಾರತೀಯ ಡೈರಿ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಿಗೆ ನಾಂದಿ ಹಾಡಿದೆ.