ಕಾಸರಗೋಡು: ಕೇರಳ ಪಶುಸಂಗೋಪನಾ ಇಲಾಖೆಯ ವೆಟರಿನರಿ ವೈದ್ಯರ ಸಂಘಟನೆ ಕೇರಳ ವೆಟರಿನರಿಯನ್ಸ್ ಸರ್ವೀಸ್ ಅಸೋಸಿಯೇಶನ್‍ನ 23ನೇ ರಜ್ಯ ಸಮ್ಮೇಳನ ಮೇ 13ಮತ್ತು 14ರಂದು ಕಾಸರಗೋಡು ಜಿಲ್ಲೆಯ ಪಡನ್ನಕ್ಕಾಡ್‍ನ ಬೇಕಲ್ ಕ್ಲಬ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪದಾಧಿಕಾರಿ ಡಾ.ಸುರೇಶ್ ಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯ ಪಶುಸಂಗೋಪನಾ ಸಚಿವೆ ಜೆ. ಚಿಂಚುರಾಣಿ ಸಮ್ಮೇಳನವನ್ನು ನಿನ್ನೆ ಉದ್ಘಾಟಿಸಿದರು. ಶಾಸಕ ಇ ಚಂದ್ರಶೇಖರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸರ್ಕಾರಿ ಅಧಿಕಾರಿಗಳು, ಇತರೆ ಜಿಲ್ಲೆಗಳಿಂದ ಚುನಾಯಿತ ಸದಸ್ಯರು ಹಾಗೂ ಅವರ ಕುಟುಂಬದವರು ಸೇರಿದಂತೆ 250 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪಶುವೈದ್ಯರಿಗೆ ವೈಜ್ಞಾನಿಕ ವಿಚಾರ ಸಂಕಿರಣ, ಕುಟುಂಬ ಸಮ್ಮಿಲನ, ಹೊಸದಾಗಿ ಪ್ರವೇಶಿಸುವವರಿಗೆ ಓರಿಯಂಟೇಶನ್ ಕಾರ್ಯಕ್ರಮ ಮತ್ತು ಸಾಂಸ್ಥಿಕ ಚರ್ಚೆಗಳು ನಡೆಯಲಿವೆ. ಪಶುವೈದ್ಯರಿಗಾಗಿ ವೈಜ್ಞಾನಿಕ ವಿಚಾರ ಸಂಕಿರಣವನ್ನು ಏಷ್ಯಾದ ಪ್ರಮುಖ ಚರ್ಮರೋಗ ತಜ್ಞ ಬೆಂಗಳೂರಿನ ಡಾ.ಉಮೇಶ್ ಕಾಲಹಳ್ಳಿ ಮುನ್ನಡೆಸಲಿದ್ದಾರೆ. ವೈದ್ಯರು ಮತ್ತು ಕುಟುಂಬದ ಸದಸ್ಯರನ್ನು ಒಳಗೊಂಡ ಕಲಾ ಸಂಜೆಯನ್ನು ಖ್ಯಾತ ಚಲನಚಿತ್ರ ನಟ ಕುಞÂಕೃಷ್ಣನ್ ಮಾಸ್ಟರ್ ಉದ್ಘಾಟಿಸಲಿದ್ದಾರೆ. ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ, ರೇಬೀಸ್-ಬೀದಿ ನಾಯಿ ಸಮಸ್ಯೆ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಏಕ ಆರೋಗ್ಯ ವ್ಯವಸ್ಥೆಯ ಪ್ರಸ್ತುತತೆಯ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು, ಜತೆಗೆ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಡಾ.ವಿ.ವಿ.ಪ್ರದೀಪ್ ಕುಮಾರ್, ಡಾ.ಜಿ.ಎಂ.ಸುನೀಲ್, ಡಾ.ಕೆ.ಎಂ.ಸತೀಶನ್, ಡಾ.ಎ.ಮುರಳೀಧರನ್ ಭಾಗವಹಿಸಿದ್ದರು.