ನವದೆಹಲಿ :ಶಿಶು ಆಹಾರ ನಿಯಮಗಳನ್ನು ಉಲ್ಲಂಘಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಡಿಜಿಟಲ್ ಮಾಧ್ಯಮದಲ್ಲಿ ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದು ವ್ಯಾಪಕವಾಗಿದೆ ಎಂದು ಭಾನುವಾರ ಬಿಡುಗಡೆ ಮಾಡಲಾದ ಅಧ್ಯಯನ ವರದಿ ಬಹಿರಂಗಪಡಿಸಿದೆ.
ನವದೆಹಲಿ :ಶಿಶು ಆಹಾರ ನಿಯಮಗಳನ್ನು ಉಲ್ಲಂಘಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಡಿಜಿಟಲ್ ಮಾಧ್ಯಮದಲ್ಲಿ ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದು ವ್ಯಾಪಕವಾಗಿದೆ ಎಂದು ಭಾನುವಾರ ಬಿಡುಗಡೆ ಮಾಡಲಾದ ಅಧ್ಯಯನ ವರದಿ ಬಹಿರಂಗಪಡಿಸಿದೆ.
ವಿಶ್ವ ಸ್ತನ್ಯಪಾನ ಸಂರಕ್ಷಣಾ ದಿನಾಚರಣೆ ಸಂದರ್ಭದಲ್ಲಿ ಭಾರತದ ಸ್ತನ್ಯಪಾನ ಉತ್ತೇಜನಾ ಜಾಲ (ಬಿಪಿಎನ್‌ಐ) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ದೇಶದಲ್ಲಿ ಶಿಶು ಹಾಲಿನ ಪೂರಕಗಳ (ಐಎಂಎಸ್) ಕಾಯ್ದೆಯ ಅನುಷ್ಠಾನದ ಮೇಲುಸ್ತುವಾರಿಗಾಗಿ ಸರ್ಕಾರ ಈ ಸಂಸ್ಥೆಯನ್ನು ಅಧಿಕೃತ ಎನ್ಜಿಓ ಎಂದು ಗುರುತಿಸಿದ್ದು, ಈ ಉಲ್ಲಂಘನೆಗಳ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
2022ರ ಜೂನ್ನಿಂದ 2023ರ ಮೇ ಅವಧಿಯವರೆಗಿನ ಅವಧಿಯ ಈ ವರದಿ, ಶಿಶು ಆಹಾರ ಹಾಗೂ ಫೀಡಿಂಗ್ ಬಾಟಲಿ ವ್ಯವಹಾರದಲ್ಲಿ ಹಲವು ಹೊಸ ಕಂಪನಿಗಳು ಉದಯಿಸಿರುವುದನ್ನು ಉಲ್ಲೇಖಿಸಿದೆ. ಇವುಗಳ ಜಾಹೀರಾತಿಗೆ ಸೆಲೆಬ್ರಿಟಿಗಳನ್ನು, ಸಾಮಾಜಿಕ ಜಾಲತಾಣಗಳ ಮೇಲೆ ಪ್ರಭಾವ ಬೀರಬಲ್ಲ ಮಹಿಳೆಯರು, ಇನ್ಸ್ಟಾಗ್ರಾಂನಲ್ಲಿ ಮತ್ತು ಯೂ ಟ್ಯೂಬ್ ನಲ್ಲಿ ಬ್ಲಾಗ್ ಬರೆಯುವ ತಾಯಂದಿರನ್ನು ಬಳಸಲಾಗಿದೆ ಎಂದು ವರದಿ ವಿವರಿಸಿದೆ. ಇದು ಐಎಂಎಸ್ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣಗಳು ಹೊಸ ಪೀಳಿಗೆಯವರಿಗೆ ಶಿಶು ಆಹಾರ, ಬಾಟಲಿ ಮತ್ತು ಸಾಧನಗಳ ಉದ್ಯಮಗಳ ಉತ್ಪನ್ನ ಪ್ರಚಾರ ಮಾಡುವ ವೇದಿಕೆಯಾಗಿದೆ. ಆದ್ದರಿಂದ ಇದರ ಮೇಲೆ ನಿಗಾ ವಹಿಸುವ ಅಗತ್ಯವಿದೆ. ಎದೆಹಾಲಿಗೆ ಪರ್ಯಾಯವಾದ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಡಿಜಿಟಲ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಇದು ವಿಶ್ವಾದ್ಯಂತ ಶಿಶು ಆಹಾರ ಸೂತ್ರಗಳ ಮಾರಾಟ ಮತ್ತು ಬಳಕೆ ಹೆಚ್ಚಿಸಲು ಕಾರಣವಾಗಿದೆ ಎಂದು ವರದಿ ವಿವರಿಸಿದೆ.