:
ಕಾಸರಗೋಡು :ಮೂವರು ಮಕ್ಕಳೊಂದಿಗೆ ಮೇಲ್ಪರಂಬದ ಕಟ್ಟಕ್ಕಲ್‍ನ ಬಾಡಿಗೆ ಕ್ವಾರ್ಟರ್ಸ್‍ನಲ್ಲಿ ಸಹೋದರಿಯ ಕುಟುಂಬದೊಂದಿಗೆ ವಾಸಿಸುತ್ತಿರುವ ಗೀತಾರಾಣಿ ಅವರಿಗೆ ಚೆಮ್ಮನಾಡ್ ಕುಟುಂಬಶ್ರೀ ಸಿಡಿಎಸ್ ಪ್ರೀತಿಯ ಮನೆಯನ್ನು ನಿರ್ಮಿಸಿಕೊಡಲಿದೆ.
ಗೀತಾರಾಣಿ ಅವರ ಸಹೋದರ ವಾಸುದೇವ ಅವರು ಚೆಮ್ಮನಾಡ್ ಪಂಚಾಯಿತಿಯ ದೇಳಿಯ ಉಲಿಚ್ಚಿ ಎಂಬಲ್ಲಿ ನೀಡಿದ 5 ಸೆಂಟ್ ಜಮೀನಿನಲ್ಲಿ ಈ ಸ್ನೇಹದ ಮನೆ ನಿರ್ಮಾಣಗೊಳ್ಳಲಿದೆ. ಚೆಮ್ನಾಡು ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಮುಮ್ತಾಜ್ ಅಬೂಬಕ್ಕರ್ ನೇತೃತ್ವದಲ್ಲಿ ಪಂಚಾಯಿತಿಯಲ್ಲಿ ನಿರ್ಮಿಸುತ್ತಿರುವ ಎರಡನೇ ಮನೆ ಇದಾಗಿದೆ. ಪಂಚಾಯಿತಿಯ ಕುಟುಂಬಶ್ರೀ ಕಾರ್ಯಕರ್ತರಿಂದ ತಲಾ ರೂ.100 ಸಂಗ್ರಹಿಸಿ ಸುಮಾರು ಎಂಟುವರೆ ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಗೀತರಾಣಿ ಅವರ ಪತಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದು, ಇಪ್ಪತ್ತು ವರ್ಷ ಪ್ರಾಯದ ಅಂಗವೈಕಲ್ಯ ಹೊಂದಿರುವ ಪುತ್ರಿ ಸೇರಿದಂತೆ ಮೂವರು ಮಕ್ಕಳ ಜತೆ ತನ್ನ ಸಹೋದರಿ ಕುಟುಂಬದ ಜತೆ ಗೀತಾರಾಣಿ ವಾಸಿಸುತ್ತಿದ್ದಾರೆ. ಚೆಮ್ನಾಡ್ ಪಂಚಾಯಿತಿ ವ್ಯಾಪ್ತಿಯಿಂದ ಸ್ನೇಹದ ಮನೆ ಸಮಿತಿಗೆ ಲಭಿಸಿದ 17 ಅರ್ಜಿಗಳಲ್ಲಿ ಗೀತಾರಾಣಿ ಅವರನ್ನು ಸಿಡಿಎಸ್ ಆಡಳಿತ ಮಂಡಳಿ ಆಯ್ಕೆ ಮಾಡಿದೆ. ಚೆಮ್ನಾಡ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕರ್ ಅವರು ಸ್ನೇಹದ ಮನೆಗೆ ಶಿಲಾನ್ಯಾಸ ನಡೆಸಿದರು. ಉಪಾಧ್ಯಕ್ಷ ಮನ್ಸೂರ್ ಕುರಿಕ್ಕಲ್, ಆಯೇಷಾ ಅಬೂಬಕ್ಕರ್, ಶಂಸುದ್ದೀನ್ ತೆಕ್ಕಿಲ್, ರಮಾ ಗಂಗಾಧರನ್, ರಾಜನ್ ಕೆ.ಪೆÇಯಿನಾಚಿ, ಮರಿಯಾ ಮಾಹಿನ್, ವೀಣಾರಾಣಿ, ಸದಸ್ಯ ಕಾರ್ಯದರ್ಶಿ ಎಂ.ಕೆ.ಪ್ರದೀಶ, ಉಪಾಧ್ಯಕ್ಷೆ ಅನೀಸ್ ಪಾಲೊಟ್ಟಿ, ಸಿಡಿಎಸ್ ಅಧ್ಯಕ್ಷೆ ಮುಮ್ತಾಜ್ ಅಬೂಬಕ್ಕರ್, ಸಿ.ಡಿ.ಎಸ್.ಸದಸ್ಯೆ ಶಶಿಕಲಾ, ಸಿ.ಡಿ.ಎಸ್. ಸದಸ್ಯರು ಉಪಸ್ಥೀತರಿದ್ದರು.