'ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯಪಟ್ಟಿಯಲ್ಲಿ ಬರುವ ವಿಷಯ. ಹಾಗಂತ, ರಾಜ್ಯವೊಂದರ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರವೊಂದು ಕಣ್ಣುಮುಚ್ಚಿ ಕೂರಲು ನಾವು ಬಿಡುವುದಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲ ಅವರಿದ್ದ ಪೀಠವು ಹೇಳಿತು.
'ಬಹುಸಂಖ್ಯಾತ ಮೈತೇಯಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಮಣಿಪುರ ಹೈಕೋರ್ಟ್‌ನ ನಿರ್ಧಾರದ ಕಾನೂನು ಆಯಾಮದ ಕುರಿತು ನಾವು ವಿಚಾರಣೆ ನಡೆಸುವುದಿಲ್ಲ. ಈ ಸಂಬಂಧದ ಅರ್ಜಿಗಳು ಈಗಾಗಲೇ ವಿಸ್ತೃತ ವಿಭಾಗೀಯ ಪೀಠದ ಮುಂದಿದೆ' ಎಂದಿತು.
ಕೂಕಿ ಹಾಗೂ ಇತರೆ ಬುಡಕಟ್ಟು ಸಮುದಾಯಗಳ ಭದ್ರತೆಯ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ನ್ಯಾಯಾಲಯವು, 'ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಗ್ರಾಮಗಳಲ್ಲಿ ಶಾಂತಿ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು' ಎಂದು ಮುಖ್ಯ ಕಾರ್ಯದರ್ಶಿ ಹಾಗೂ ಅವರ ಭದ್ರತಾ ಸಲಹೆಗಾರರಿಗೆ ಆದೇಶಿಸಿತು.
ಮೀಸಲಾತಿ ಕುರಿತು ಮಣಿಪುರ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸುವಂತೆ ಬುಡಕಟ್ಟು ಸಮುದಾಯಗಳು ಸುಪ್ರೀಂ ಕೋರ್ಟ್ ಸೂಚಿಸಿತು.
'ಪ್ರಚೋದನಾಕಾರಿ ಹೇಳಿಕೆ ನೀಡಬೇಡಿ'
'ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ತಮ್ಮ ಅಧಿಕೃತ ಖಾತೆಗಳಲ್ಲಿ ಕೂಕಿ ಸಮುದಾಯದವರನ್ನು ಉದ್ದೇಶಿಸಿ ದ್ವೇಷ ಕಾರುವ ಮಾತನಾಡುತ್ತಿದ್ದಾರೆ. 'ಕೈಸ್ತ ಧರ್ಮದ ಹೆಸರಲ್ಲಿ ನೀವು ಮಣಿಪುರವನ್ನು ಧ್ವಂಸ ಮಾಡಿದಿರಿ....' ಎಂಬಿತ್ಯಾದಿಯಾಗಿ ಅವರು ಮಾತನಾಡುತ್ತಿದ್ದಾರೆ' ಎಂದು ವಕೀಲ ನಿಜಾಮ್ ಪಾಶಾ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ಸಾಂವಿಧಾನಿಕ ಹುದ್ದೆಯಲ್ಲಿರುವವರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಪ್ರಚೋದನಕಾರಿಯಾಗಿ ಮಾತನಾಡಬಾರದು' ಎಂದಿತು.
ಮ್ಯಾನ್ಮಾರ್‌ನಿಂದ ವಲಸಿಗರು ಅಕ್ರಮವಾಗಿ ಮಣಿಪುರವನ್ನು ಪ್ರವೇಶಿಸುತ್ತಿದ್ದು, ಇವರು ಅಪೀಮು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಉಗ್ರರು ರಾಜ್ಯದ ಒಳಗೆ ನುಸುಳುತ್ತಿದ್ದಾರೆ ಎಂದು ಹಿರಿಯ ವಕೀಲ ರಂಜಿತ್ ಕುಮಾರ್ ಅವರು ವಾದಿಸಿದರು.
'ನಮ್ಮ ಈ ವಿಚಾರಣೆಯಲ್ಲಿ ರಾಜಕೀಯ ಹಾಗೂ ಯೋಜನೆಗಳ ವಿಚಾರ ನುಸುಳಲು ಅನುವು ಮಾಡಿಕೊಡುವುದಿಲ್ಲ. ಸಾಂವಿಧಾನಿಕ ನ್ಯಾಯಾಲಯದ ವ್ಯಾಪ್ತಿ ಎಷ್ಟು ಎಂಬುದು ನಮಗೆ ಗೊತ್ತಿದೆ' ಎಂದಿತು.