ನವದೆಹಲಿ: ರಾಹುಲ್ ಗಾಂಧಿ ಪಾಸ್ಪೋರ್ಟ್ ವಿಚಾರವಾಗಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಮೆಟ್ರೋಪಾಲಿಟನ್ ನ್ಯಾಯಾಲಯ ಸೂಚನೆ ನೀಡಿದೆ.
ಸಂಸದರಾಗಿ ಅನರ್ಹಗೊಂಡಿರುವ ರಾಹುಲ್ ಗಾಂಧಿ ರಾಜತಾಂತ್ರಿಕ ಪಾಸ್ಪೋರ್ಟ್ ನ್ನು ಹಿಂತಿರುಗಿಸಿದ್ದು, ಸಾಮಾನ್ಯ ಪಾಸ್ಪೋರ್ಟ್ ಗೆ ನಿರಾಕ್ಷೇಪಣ ಪತ್ರ ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.ರಾಹುಲ್ ಗಾಂಧಿ ಸುಬ್ರಹ್ಮಣಿಯನ್ ಸ್ವಾಮಿ ಅವರು ದೂರುದಾರರಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಯಾಗಿದ್ದಾರೆ.
ರಾಹುಲ್ ಗಾಂಧಿಗೆ ಜಾಮೀನು ನೀಡುವ ವೇಳೆ ಕೋರ್ಟ್ ಮಾಜಿ ಸಂಸದರ ಪ್ರಯಾಣದ ಮೇಲೆ ನಿರ್ಬಂಧಗಳನ್ನು ವಿಧಿಸಿರಲಿಲ್ಲ. ರಾಹುಲ್ ಗಾಂಧಿ ಅವರ ಪ್ರಯಾಣದ ಮೇಲೆ ನಿರ್ಬಂಧಗಳನ್ನು ವಿಧಿಸುವಂತೆ ಕೋರ್ಟ್ ಗೆ ಸುಬ್ರಹ್ಮಣಿಯನ್ ಸ್ವಾಮಿ ಮನವಿ ಸಲ್ಲಿಸಿದ್ದರು.
ಪ್ರಯಾಣಿಸುವ ಹಕ್ಕು ಮೂಲಭೂತ ಹಕ್ಕಾಗಿರುವುದರಿಂದ ಮತ್ತು ನ್ಯಾಯಾಲಯವು ಗಾಂಧಿಯವರ ಪ್ರಯಾಣಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸದ ಕಾರಣ, ಅವರು ಯಾವುದೇ ನ್ಯಾಯಾಲಯದ ಅನುಮತಿಯನ್ನು ಪಡೆಯದೆ ಹಲವಾರು ಬಾರಿ ಪ್ರಯಾಣಿಸಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ವಕೀಲರಾದ ನಿಖಿಲ್ ಭಲ್ಲಾ ಮತ್ತು ಸುಮಿತ್ ಕುಮಾರ್ ಅವರೊಂದಿಗೆ ಹಾಜರಾದ ಗಾಂಧಿ ಪರ ವಕೀಲ ತರನ್ನುಮ್ ಚೀಮಾ ಅವರು ಹೊಸ ಪಾಸ್‌ಪೋರ್ಟ್ ಪಡೆಯಲು ಕಾಂಗ್ರೆಸ್ ನಾಯಕನಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಆದಾಗ್ಯೂ, ಅರ್ಜಿಯ ಬಗ್ಗೆ ಆಕ್ಷೇಪಣೆ ಸಲ್ಲಿಸುವ ಹಕ್ಕು ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಇದೆ ಎಂದು ಎಸಿಎಂಎಂ ನ್ಯಾಯಾಧೀಶರಾದ ಮೆಹ್ತಾ ಹೇಳಿದ್ದಾರೆ. ಸ್ವಾಮಿ ಕಾಲಾವಕಾಶ ಕೋರಿದ ಬಳಿಕ ಮೇ 26ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದೆ. ಅದೇ ದಿನ ಈ ಬಗ್ಗೆ ವಾದ ಆಲಿಸುವುದಾಗಿ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.