ಕಾಸರಗೋಡು: ಕೇರಳ ಎಡರಂಗ ಸರ್ಕಾರದ ಇಬ್ಬರು ಸಚಿವರು ಭಾಗವಹಿಸಿದ್ದ ದೂರು ಪರಿಹಾರ ಅದಾಲತ್ ಪ್ರಹಸನವಾಗಿ ಮಾರ್ಪಟ್ಟಿರುವುದಾಗಿ ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ತಿಳಿಸಿದ್ದಾರೆ.
ತಾಲೂಕಿನ ವಿವಿಧೆಡೆಯಿಂದ ನೂರಾರು ಮಂದಿಗೆ ಕರೆ ಮಾಡಿ ಅದಾಲತ್‍ಗೆ ಕರೆಸಿ, ಅವರಿಗೆ ಸರ್ಕಾರದ ಸವಲತ್ತುಗಳ್ಯಾವುದೂ ಇಲ್ಲ ಎಂದು ತಿಳಿಸಿ ಕಳುಹಿಸಿಕೊಡಲಾಗಿದೆ. ಈ ಕಾರ್ಯಕ್ರಮವು ಸಾಮಾನ್ಯ ಜನರಿಗೆ ಮತ್ತು ಒಟ್ಟಾರೆ ಕಾಸರಗೋಡಿಗೆ ಯಾವ ರೀತಿಯಲ್ಲಿ ಫಲಪ್ರದವಾಗಿದೆ ಎಂಬುದನ್ನು ಸರ್ಕಾರ ವ್ಯಕ್ತಪಡಿಸಬೇಕು. ಬೆರಳೆಣಿಕೆಯ ಮಂದಿಗೆ ಬಿಪಿಎಲ್ ಕಾರ್ಡು ವಿತರಿಸಲು ತಿರುವನಂತಪುರದಿಂದ ಕಾಸರಗೋಡಿಗೆ ಇಬ್ಬರು ಸಚಿವರು ಹಾಗೂ ಅಧಿಕಾರಿಗಳ ದಂಡು ಬರಬೇಕಾಯಿತು. ಕೇವಲ ಗ್ರಾಮಾಧಿಕಾರಿ ನಡೆಸಬಹುದಾದ ಕಾರ್ಯಕ್ರಮವನ್ನು ಪ್ರಚಾರದ ಗೀಳಿನಿಂದ ಈ ರೀತಿಯಾಗಿ ಅಬ್ಬರದ ಕಾರ್ಯಕ್ರಮವನ್ನಾಗಿ ಆಚರಿಸಲಾಗಿದೆ.
ಊಮನ್‍ಚಾಂಡಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ದೇಶಕ್ಕೆ ಮಾದರಿಯಾಗುವ ರೀತಿಯ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿ ಜನಮನ್ನಣೆ ಗಳಿಸಿದ್ದರೆ, ಅಂದು ಸಿಪಿಎಂ ಯಾವ ರೀತಿ ಅಪಹಾಸ್ಯ ಮಾಡಿದ್ದಾರೆ ಎಂಬುದನ್ನು ಕೇರಳದ ಜನತೆ ಮರೆತಿಲ್ಲ. ಗ್ರಾಮಾಧಿಕಾರಿ ನಡೆಸಬೇಕಾದ ಕೆಲಸವನ್ನು ಇಂದು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದವರು. ಊಮ್ಮನ್ ಚಾಂಡಿ ಅವರ ನೇತೃತ್ವದಲ್ಲಿ ನಡೆಸಲಾದ ಜನಸಂಪರ್ಕ ಕಾರ್ಯಕ್ರಮಗಳು ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹಲವಾರು ಸರ್ಕಾರಿ ಆದೇಶಗಳನ್ನು ಹೊರಡಿಸಿದ ಪರಿಣಾಮ ಅಧಿಕಾರಿ ವಲಯದಲ್ಲಿ ಸಂಚಲನಕ್ಕೂ ಕಾರಣವಾಗಿತ್ತು. ಆರೋಗ್ಯ ಕ್ಷೇತ್ರ ಸೇರಿದಂತೆ ಕಾಸರಗೋಡು ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಇಬ್ಬರೂ ಸಚಿವರು ಆಸಕ್ತಿ ತೋರಿಸಿಲ್ಲ. ಎಡರಂಗ ನಡೆಸುತ್ತಿರುವ ಅದಾಲತ್ ಜನಸಾಮಾನ್ಯರ ಮೇಲಿನ ನೈಜ ಕಾಳಜಿಯಿಂದ ನಡೆಯುತ್ತಿಲ್ಲ, ಬದಲಾಗಿ ತಮ್ಮ ಸರ್ಕಾರದ ಪ್ರಚಾರಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ ಎಂದು ಮಾಹಿನ್ ಹಾಜಿ ವ್ಯಂಗ್ಯವಾಡಿದರು.