ಮಕ್ಕಳ ಮನಸ್ಸು ತುಂಬಾನೇ ಸೂಕ್ಷ್ಮ. ಚಿಕ್ಕ ವಯಸ್ಸಿನಲ್ಲಿ ಅವರಿಗೆ ಮನೆ ಬಿಟ್ಟು ಬೇರೆ ಪ್ರಪಂಚ ಗೊತ್ತಿರೋದಿಲ್ಲ. ಅಪರಿಚಿತರೊಂದಿಗೆ ಅವರಿಗೆ ಸೇರೋದು ಕಷ್ಟವಾಗುತ್ತದೆ. ಅಂತದ್ರಲ್ಲಿ ಹೊಸದಾಗಿ ಶಾಲೆಗೆ ಸೇರಿಸಿದಾಗ ಮಕ್ಕಳು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ತಂದೆ-ತಾಯಿಯನ್ನು ಬಿಟ್ಟು ದೂರ ಹೋಗುವುದು, ಇಡೀ ದಿನ ಅಮ್ಮನನ್ನು ಬಿಟ್ಟು ಬೇರೊಂದು ಜಾಗದಲ್ಲಿ ಅಪರಿಚಿತ ಮಕ್ಕಳೊಂದಿಗೆ ಕಳೆಯೋದು ತುಂಬಾನೇ ಕಷ್ಟ. ಇಂತಹ ಸಮಯದಲ್ಲಿ ಮಕ್ಕಳನ್ನು ಶಾಲೆಯ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್.ನಿಮ್ಮ ಮಗು ಮೊಟ್ಟ ಮೊದಲು ಶಾಲೆಗೆ ಹೋಗೋದಾದ್ರೆ ಕೊಂಚ ಕಷ್ಟವೇ ಸರಿ. ಹೆಚ್ಚಿನ ಮಕ್ಕಳಿಗೆ ಮನೆಯನ್ನು ಬಿಟ್ಟು ಶಾಲೆಗೆ ಹೋಗುವುದು ಒಂದು ರೀತಿ ನೋವಾಗುತ್ತದೆ. ಶಾಲೆಗೆ ಹೋಗುವ ಮೊದಲು ಅಳಬಹುದು, ಹಠ ಮಾಡಬಹುದು. ಇಂತಹ ಸಂದರ್ಭದಲ್ಲಿ ಅವರು ಬೆಳಗ್ಗೆ ಎದ್ದ ತಕ್ಷಣ ಅವರನ್ನು ಖುಷಿಯಾಗಿ ಇಟ್ಟುಕೊಳ್ಳಬೇಕು. ಅವರ ಮನಸ್ಸಿಗೆ ಖುಷಿ ನೀಡುವ ಚಟುವಟಿಕೆಗಳನ್ನು ಮಾಡಿಸಿ. ಆಗ ಅವರ ಮನಸ್ಥಿತಿ ಬದಲಾಗುತ್ತದೆ. ಶಾಲೆಗೆ ಖುಷಿ ಖುಷಿಯಿಂದ ಹೊರಟು ನಿಲ್ಲುತ್ತಾರೆ.
ನಿಮ್ಮ ಮಗು ಬೆಳಗ್ಗೆ ಎದ್ದು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಬೇಕಾದರೆ ರಾತ್ರಿ ಸರಿಯಾದ ಸಮಯಕ್ಕೆ ನಿಮ್ಮ ಮಗುವನ್ನು ಮಲಗಿಸಿ. ನಿತ್ಯವು ಅದೇ ಸಮಯವನ್ನು ಪಾಲಿಸಿ. ರಾತ್ರಿ ಮಲಗುವಾಗ ಕೊಂಚ ತಡವಾದರೂ ಮಾರನೇ ದಿನ ಮಕ್ಕಳು ಏಳೋದಕ್ಕೆ ಹಠ ಮಾಡುತ್ತಾರೆ. ಇದರಿಂದಾಗಿ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸೋದಕ್ಕೆ ಗಡಿಬಿಡಿಯಾಗುತ್ತದೆ. ಮಕ್ಕಳು ಕೂಡ ಇದರಿಂದ ಕಿರಿಕಿರಿ ಅನುಭವಿಸುತ್ತಾರೆ. ಬೆಳಗ್ಗೆ ಅವರ ಮೂಡ್ ಸರಿಇರದೇ ಹೋದರೆ ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡುವ ಸಾಧ್ಯತೆಯಿದೆ.
ಮಕ್ಕಳನ್ನು ಮೊಟ್ಟ ಮೊದಲು ಶಾಲೆಗೆ ಕಳುಹಿಸುವಾಗ ಹೆಚ್ಚಿನ ಪೋಷಕರು ಖಂಡಿತ ಪಾನಿಕ್ ಆಗುತ್ತಾರೆ. ಇಷ್ಟು ದಿನ ಮನೆಯಲ್ಲಿಯೇ ಇದ್ದ ಮಗು ಶಾಲೆಯ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತೋ ಅನ್ನುವ ಭಯ ಇರುತ್ತದೆ. ಹೀಗಾಗಿ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರೇ ಆತಂಕಕ್ಕೆ ಒಳಗಾಗುತ್ತಾರೆ. ಜೊತೆಗೆ ಪೋಷಕರು ಪದೇ ಪದೇ ನೀನು ಶಾಲೆಗೆ ಹೋಗಬೇಕು, ಅಲ್ಲಿ ನೀವು ಒಬ್ಬನೇ ಇರಬೇಕು. ಈ ರೀತಿ ಹೇಳುತ್ತಿದ್ದರೆ ಮಗುವಿಗೂ ಒಂದು ರೀತಿ ಭಯ ಕಾಡುತ್ತೆ. ಶಾಲೆಗೆ ಹೋಗಬೇಕಲ್ವಾ ಅನ್ನೋ ಆತಂಕ ಹೆಚ್ಚಾಗುತ್ತದೆ. ಹೀಗಾಗಿ ಪೋಷಕರು ಪಾನಿಕ್ ಆಗಿ ಮಕ್ಕಳು ಪಾನಿಕ್ ಆಗುವಂತೆ ಮಾಡಬೇಡಿ.
4. ಶಾಲೆಗೆ ಹೋಗುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿ
ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಅವರಿಗೆ ಅಕ್ಷರಾಭ್ಯಾಸ ಮಾಡುವುದು ತುಂಬಾನೇ ಒಳ್ಳೆಯದಾಗುತ್ತದೆ. ಸ್ವಲ್ಪನಾದ್ರು ಅಕ್ಷರಗಳ ಪರಿಚಯ ಇರಲೇಬೇಕು. ಯಾಕಂದ್ರೆ ಶಾಲೆಗೆ ಹೋದ ನಂತರ ಒಂದೇ ಸಾರಿಗೆ ಅಕ್ಷರಭ್ಯಾಸ ಮಾಡಿಸುವಾಗ ಮಕ್ಕಳಿಗೆ ಕಷ್ಟವಾಗುತ್ತದೆ. ಅದಕ್ಕಿಂತ ಮೊದಲೇ ಅವರಿಗೆ ಅಕ್ಷರಗಳ ಪರಿಚಯವಿದ್ರೆ ಯಾವ ರೀತಿ ಸಮಸ್ಯೆ ಆಗೋದಿಲ್ಲ.
5. ಮಕ್ಕಳನ್ನು ಸ್ವತಂತ್ರರನ್ನಾಗಿ ಮಾಡಿ
ಚಿಕ್ಕ ಮಕ್ಕಳು ಮನೆಯಲ್ಲಿ ಅಮ್ಮನನ್ನೇ ಅವಲಂಬಿಸಿರುತ್ತಾರೆ. ಅವರ ಊಟ, ತಿಂಡಿ, ಸ್ನಾನದಿಂದ ಹಿಡಿದು ಎಲ್ಲವನ್ನೂ ಅಮ್ಮಂದಿರೇ ಮಾಡಿಸುತ್ತಾರೆ. ಶಾಲೆಗೆ ಹೋದ ನಂತರ ಅಮ್ಮಂದಿರು ಅವರ ಹಿಂದೆ ಹೋಗೋದಕ್ಕೆ ಆಗೋದಿಲ್ಲ. ಹೀಗಾಗಿ ಕೆಲವೊಂದು ಚಿಕ್ಕಪುಟ್ಟ ಅಭ್ಯಾಸಗಳನ್ನು ಶಾಲೆಗೆ ಹೋಗುವ ಮೊದಲೇ ನೀವೇ ಅಭ್ಯಾಸ ಮಾಡಿಸಿ. ನೀರು ಕುಡಿಯುವುದು, ತಮ್ಮನ್ನು ತಾವು ಸ್ವಚ್ಛವಾಗಿ ಇಟ್ಟುಕೊಳ್ಳುವುದು. ಬಟ್ಟೆಯ ಬಗೆಗಿನ ಕಾಳಜಿ ಇತ್ಯಾದಿ. ಇವುಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ.
6. ಮಕ್ಕಳ ಆತಂಕವನ್ನು ದೂರ ಮಾಡಿಸಿ
ಮೊದ ಮೊದಲು ಶಾಲೆಗೆ ಹೋಗುವುದು ಎಂದರೆ ಒಂದು ರೀತಿ ಆತಂಕವೇ ಸರಿ. ಅದ್ರಲ್ಲಿ ಶಾಲೆಗೆ ಹೋದ ಮೊದಲ ಎರಡು ವಾರಗಳು ಹೆಚ್ಚಿನ ಮಕ್ಕಳಿಗೆ ಶಾಲೆಗೆ ಹೋಗೋದಕ್ಕೆ ಇಷ್ಟ ಇರೋದಿಲ್ಲ. ದಿನ ನಿತ್ಯ ಒಂದಲ್ಲ ಒಂದು ಕಾರಣಗಳನ್ನು ನೀಡುತ್ತಾರೆ. ಒಟ್ಟಿನಲ್ಲಿ ಶಾಲೆಯನ್ನು ತಪ್ಪಿಸೋದಕ್ಕೆ ಪ್ರಯತ್ನಿಸುತ್ತಾರೆ.
ಇಂತಹ ಸಂದರ್ಭದಲ್ಲಿ ಪೋಷಕರು ಅವರಿಗೆ ಸಮಾಧಾನ ಹೇಳಿ ಅವರ ಆತಂಕ ದೂರ ಮಾಡಬೇಕು. ಚಿಂತಿಸಬೇಡ ಮಧ್ಯಾಹ್ನ ಅಪ್ಪ ಶಾಲೆಗೆ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತಾರೆ, ಶಾಲೆಗೆ ಹೋಗಿ ಬಂದ ನಂತರ ನಿನಗೆ ಚಾಕಲೇಟ್, ಐಸ್ ಕ್ರೀಮ್ ಎಲ್ಲವನ್ನೂ ಕೊಡಿಸುತ್ತೇನೆ ಅಂತೆಲ್ಲಾ ಹೇಳಿ ಅವರನ್ನು ಸಮಾಧಾನ ಪಡಿಸಿ.
ಈ ಟಿಪ್ಸ್ ಗಳು ನಿಮ್ಮ ಮಗುವನ್ನು ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲು ಖಂಡಿತ ಸಹಾಯ ಮಾಡುತ್ತದೆ.