ದೆಹಲಿ: ಆರ್ಬಿಐ ಹೊಸ ಪಾವತಿ ಸೇವೆಗಳನ್ನು ನೀಡಲು ಮುಂದಾಗಿದ್ದು, ಇದಕ್ಕೆ ಅಗತ್ಯವಿರುವ ತಯಾರಿ ನಡೆಸುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ UPI, NEFT, RTGS ಸೇವೆಗಳನ್ನು ಬಳಸಲು ನೆಟ್‌ವರ್ಕ್ ಮತ್ತು IT ಸೌಲಭ್ಯಗಳು ಕಡ್ಡಾಯವಾಗಿದೆ.
ಆದರೆ ನೈಸರ್ಗಿಕ ವಿಪತ್ತು, ಯುದ್ಧ ಹಾಗೂ ಮುಂತಾದ ತುರ್ತುಪರಿಸ್ಥಿತಿ ಸಂದರ್ಭಗಳು ನೆಟ್‌ವರ್ಕ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲೆಂದು ಆರ್ಬಿಐ ಲೈಟ್‌ವೇಟ್ ಪೇಮೆಂಟ್ ಮತ್ತು ಸೆಟಲ್‌ಮೆಂಟ್ ಸಿಸ್ಟಮ್(LPSS) ಎಂಬ ನೂತನ ತಂತ್ರಜ್ಞಾನವನ್ನು ತರಲು ಮುಂದಾಗಿದೆ.
ಇದು ನೈಸರ್ಗಿಕ ವಿಪತ್ತುಗಳು ಅಥವಾ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಎಲ್ಲಿಂದಲಾದರೂ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವುದರ ಜತೆಗೆ ಅಗತ್ಯಕ್ಕೆ ತಕ್ಕಂತೆ ಸಕ್ರಿಯಗೊಳಿಸುವ ವಿನ್ಯಾಸವನ್ನು ಒಳಗೊಂಡಿದೆ ಎನ್ನಲಾಗಿದೆ.