ನವದೆಹಲಿ: ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ತಮ್ಮ ಮೇಲಿನ ಆರೋಪ ಕುರಿತಂತೆ ನಾರ್ಕೊ ಪರೀಕ್ಷೆಗೆ ಒಳಗಾಗಲೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಕುಸ್ತಿಪಟುಗಳಾದ ವಿನೇಶ್ ಫೊಗಟ್, ಭಜರಂಗ್ ಪೂನಿಯಾ ಸಹ ನಾರ್ಕೊ ಪರೀಕ್ಷೆಗೆ ಒಳಗಾಗಬೇಕೆಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು ಒತ್ತಾಯಿಸಿದ್ದಾರೆ.
ನಾರ್ಕೊ, ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ನಾನು ಸಿದ್ಧನಿದ್ದೇನೆ. ನನ್ನ ಜೊತೆ ವಿನೇಶ್ ಫೊಗಟ್ ಮತ್ತು ಬಜರಂಗ್ ಪೂನಿಯಾ ಸಹ ಈ ಪರೀಕ್ಷೆಗಳಿಗೆ ಒಳಪಡಬೇಕು ಎಂದು ಅವರು ಹೇಳಿದ್ದಾರೆ.
ಈ ಇಬ್ಬರೂ ಕುಸ್ತಿಪಟುಗಳು ಪರೀಕ್ಷೆಗಳಿಗೆ ಸಿದ್ಧವಾದರೆ ಪತ್ರಿಕಾಗೋಷ್ಠಿ ಕರೆದು, ಘೋಷಣೆ ಮಾಡಿ. ನಾನು ಪರೀಕ್ಷೆಗೆ ಸಿದ್ಧವಿರುವಿರುವುದಾಗಿ ಅವರಿಗೆ ವಚನ ನೀಡಲು ಬಯಸುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.
'ನಾನು ಇಂದಿಗೂ ನನ್ನ ಮಾತಿಗೆ ಬದ್ಧನಾಗಿದ್ದೇನೆ. ಶಾಶ್ವತವಾಗಿ ದೃಢವಾಗಿರುತ್ತೇನೆ ಎಂದು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ಜೈ ಶ್ರೀ ರಾಮ್' ಎಂದು ಸಿಂಗ್ ತಿಳಿಸಿದ್ದಾರೆ.
ಬ್ರಿಜ್ ಭೂಷಣ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಪ್ರಮುಖ ಕುಸ್ತಿಪಟುಗಳು ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ,
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿ ಪೊಲೀಸರು, ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಕ್ರೀಡಾ ಸಚಿವಾಲಯವು ತನಿಖೆ ಮುಗಿಯುವವರೆಗೂ ಕುಸ್ತಿ ಫೆಡರೇಶನ್‌ನ ಎಲ್ಲಾ ಚಟುವಟಿಕೆಗಳನ್ನು ರದ್ದುಗೊಳಿಸಿದೆ.