ಕೋಲ್ಕತಾ:ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಹಾಗೂ ಕೈಗಾರಿಕಾ ನಗರಿ ಹೌರಾ ಅವಳಿ ನಗರಗಳು. ಹೂಗ್ಲಿ ನದಿಯು ಈ ಅವಳಿ ನಗರಗಳನ್ನು ಪ್ರತ್ಯೇಕಿಸಿದರೆ, ಜಗತ್ಪ್ರಸಿದ್ಧ ತೂಗು ಸೇತುವೆಯಾದ ಹೌರಾ ಬ್ರಿಜ್ (ರಬೀಂದ್ರ ಸೇತು ಎಂದೂ ಕರೆಯಲಾಗುತ್ತದೆ.) ಇವುಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಹೌರಾ ನದಿಯಲ್ಲಿ 530 ಮೀಟರ್ ಉದ್ದ ಸುರಂಗವನ್ನು ನಿರ್ವಿುಸಿ, ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುವ ಕಾಮಗಾರಿ ಸಾಗಿದೆ. ನದಿಯ ಮೇಲ್ಮೈಯಿಂದ 30 ಮೀಟರ್ಗಳಿಗಿಂತ ಹೆಚ್ಚು (ಅಂದಾಜು 100 ಅಡಿ) ಅಳದಲ್ಲಿ ಈ ಸುರಂಗವನ್ನು ನಿರ್ವಿುಸಲಾಗುತ್ತಿದೆ.
ನದಿಯೊಳಗೆ ಸುರಂಗ ಮಾರ್ಗವನ್ನು ಬಹುತೇಕವಾಗಿ ಪೂರ್ಣಗೊಳಿಸಲಾಗಿದ್ದು, ಈಗ ಪ್ರಾಯೋಗಿಕ ಸಂಚಾರ ಕೈಗೊಳ್ಳಲಾಗುತ್ತಿದೆ. ಇನ್ನೂ ಏಳು ತಿಂಗಳು ಕಾಲ ಪ್ರಾಯೋಗಿಕ ಸಂಚಾರ ನಡೆಸಿದ ನಂತರ ಈ ಮಾರ್ಗವನ್ನು ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ. ಈ ಸುರಂಗದಲ್ಲಿ ಮೆಟ್ರೋ ರೈಲುಗಳು ಗಂಟೆಗೆ 80 ಕಿ.ಮೀ.ವೇಗದಲ್ಲಿ ಸಂಚರಿಸಲಿವೆ. ನದಿಯೊಳಗಿನ ಈ ಅರ್ಧ ಕಿ.ಮೀ. ಅಂತರವನ್ನು ಅಂದಾಜು 45 ಸೆಕೆಂಡುಗಳಲ್ಲಿ ಕ್ರಮಿಸಲಿವೆ.
ಪೂರ್ವ-ಪಶ್ಚಿಮ ಕಾರಿಡಾರ್: ಕೋಲ್ಕತಾ ಮೆಟ್ರೋ ಜಾಲದ ಎರಡನೇ ಮಾರ್ಗವಾದ ಪೂರ್ವ-ಪಶ್ಚಿಮ ಕಾರಿಡಾರ್ 16.55-ಕಿಮೀ ಉದ್ದವಿದೆ. ಇದು ಪೂರ್ಣಗೊಂಡ ನಂತರ, ಕೋಲ್ಕತಾದ ಪೂರ್ವ ಪಾರ್ಶ್ವದಲ್ಲಿರುವ ಐಟಿ ಕೇಂದ್ರವಾದ ಸಾಲ್ಟ್ ಲೇಕ್ ಸೆಕ್ಟರ್ 5 ಅನ್ನು ನಗರದ ಮುಖ್ಯ ರೈಲು ನಿಲ್ದಾಣವಿರುವ ಹೌರಾದ ಪಶ್ಚಿಮ ಉಪನಗರಕ್ಕೆ ಸಂರ್ಪಸುತ್ತದೆ. ಗ್ರೀನ್ ಲೈನ್ ಎಂದು ಕರೆಯಲ್ಪಡುವ ಈ ಮಾರ್ಗವು ಹೌರಾ ನಿಲ್ದಾಣವನ್ನು ಸೀಲ್ದಾಹ್ ನಿಲ್ದಾಣಕ್ಕೆ ಸಂರ್ಪಸುತ್ತದೆ. ಕೋಲ್ಕತ್ತಾದ ಉಪನಗರ ರೈಲ್ವೆ ಜಾಲದ ಕೇಂದ್ರವಾಗಿದೆ ಸೀಲ್ದಾಹ್. ಪೂರ್ವ-ಪಶ್ಚಿಮ ಕಾರಿಡಾರ್ನ ಪೂರ್ವ ಭಾಗದಲ್ಲಿ ಸಾಲ್ಟ್ ಲೇಕ್ ಸೆಕ್ಟರ್ 5ರಿಂದ ಸೀಲ್ದಾಹ್ವರೆಗೆ ಈಗಾಗಲೇ ಮೆಟ್ರೋ ರೈಲುಗಳು ಸಂಚರಿಸುತ್ತಿವೆ.
ಪೂರ್ವ-ಪಶ್ಚಿಮ ಕಾರಿಡಾರ್ ಈ ಮೊದಲು 5.75 ಕಿಮೀ ಉದ್ದ ಇದ್ದು, ಈಗ ಅದು ವಿಸ್ತರಣೆಗೊಳ್ಳುತ್ತಿದೆ. ಈ ಕಾರಿಡಾರ್ನ ಪಶ್ಚಿಮ ಭಾಗದ ಮಾರ್ಗವು ಭೂಗತವಾಗಿದೆ. ದೇಶದ ಅತ್ಯಂತ ಆಳವಾದ (33 ಮೀಟರ್ ಆಳ) ಹೌರಾ ನಿಲ್ದಾಣ ಸೇರಿದಂತೆ ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿವೆ. ಈ ಮಾರ್ಗವು ಬೆನೊಯ್ ಬಾದಲ್ ದಿನೇಶ್ ಬಾಗ್ ಮತ್ತು ಎಸ್ಪ್ಲೇನೇಡ್ ನಡುವಿನ ಸೆಂಟ್ರಲ್ ಕೋಲ್ಕತಾದ ವ್ಯಾಪಾರ ಪ್ರದೇಶದ ಮೂಲಕ ಹಾದುಹೋಗುತ್ತದೆ. ಅಲ್ಲದೆ, ಹೌರಾ ಮತ್ತು ಸೀಲ್ದಾಹ್ ನಿಲ್ದಾಣಗಳನ್ನು ಸಂರ್ಪಸುತ್ತದೆ. ಹೀಗಾಗಿ, ಈ ಪ್ರದೇಶದಲ್ಲಿ ವಾಹನ ಹಾಗೂ ಜನ ಸಂಚಾರ ದಟ್ಟಣೆಯು ಈ ಮೆಟ್ರೋ ಮಾರ್ಗದ ಮೂಲಕ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ತಂತ್ರಜ್ಞಾನ- ಸವಾಲುಗಳು
ಮೆಟ್ರೋ ರೈಲು ಸಂಚಾರಕ್ಕಾಗಿ ಹೂಗ್ಲಿ ನದಿಯ ಅಡಿಯಲ್ಲಿರುವ ನಿರ್ವಿುಸಲಾಗುತ್ತಿರುವ ಸುರಂಗವು 5.55 ಮೀಟರ್ಗಳ ಆಂತರಿಕ ವ್ಯಾಸ ಮತ್ತು 6.1 ಮೀಟರ್ಗಳ ಬಾಹ್ಯ ವ್ಯಾಸ ಹೊಂದಿದೆ. ಎರಡು ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ) 2017ರ ಏಪ್ರಿಲ್ನಿಂದ ಜೂನ್ ನಡುವಿನ ಅವಧಿಯಲ್ಲಿ ದಾಖಲೆಯ 66 ದಿನಗಳಲ್ಲಿ ಸುರಂಗ ಕೊರೆಯುವ ಕೆಲಸವನ್ನು ಪೂರ್ಣಗೊಳಿಸಿವೆ. ಮೊದಲ ಯಂತ್ರವು 2017ರ ಮೇನಲ್ಲಿ ನದಿಯನ್ನು ದಾಟಿದರೆ, ಅದೇ ವರ್ಷ ಜೂನ್ನಲ್ಲಿ ಎರಡನೆಯದು ಕೆಲಸ ಪೂರ್ಣಗೊಳಿಸಿದೆ. ನದಿಯ ತಳದ ಸಾವಯವ ಜೇಡಿಮಣ್ಣಿನ ಅಡಿಯಲ್ಲಿ ಮರಳಿನ ಮಣ್ಣಿನ ಪದರವಿದೆ. ಇದು ಗಟ್ಟಿಯಾದ ಮಣ್ಣಿನ ಹೂಳು ಆಗಿದೆ. ಪ್ರೇರಣಾ ಮತ್ತು ರಚನಾ ಎಂದು ನಾಮಕರಣ ಮಾಡಲಾಗಿರುವ ಜರ್ಮನ್ ನಿರ್ವಿುತ ಎರಡು ಟಿಬಿಎಂಗಳು ಈ ಕೆಳಗಿನ ಪದರದ ಮೂಲಕ ಸುರಂಗವನ್ನು ಕೊರೆದಿವೆ. ನೀರಿನೊಳಗಿನ ಸುರಂಗ ಮಾರ್ಗ ಮಾತ್ರವಲ್ಲದೆ, ಡಾಲ್ಹೌಸಿಯಂತಹ ಐತಿಹಾಸಿಕ ಕಟ್ಟಡಗಳಿರುವ ಪ್ರದೇಶಗಳಲ್ಲಿ ಸುರಂಗ ನಿರ್ಮಾಣ ಕೂಡ ಸವಾಲಿನದ್ದಾಗಿತ್ತು. ಆದರೆ, ಡಾಲ್ಹೌಸಿ ಪ್ರದೇಶದಲ್ಲಿ ಒಂದೇ ಒಂದು ಕಟ್ಟಡವೂ ಬಿರುಕು ಬಿಡದೆ ಈ ಕಾರ್ಯ ಸಂಪನ್ನಗೊಂಡಿದೆ. 'ನೀರಿನ ಒಳಹರಿವು ಮತ್ತು ಸುರಂಗದಲ್ಲಿ ಸೋರಿಕೆ ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾರುಬೂದಿ ಮತ್ತು ಮೈಕ್ರೋ ಸಿಲಿಕಾದಿಂದ ಕೂಡಿದ ಕಾಂಕ್ರೀಟ್ ಮಿಶ್ರಣಗಳನ್ನು ನೀರಿನ ಪ್ರವೇಶಸಾಧ್ಯತೆಯನ್ನು ಕಡಿಮೆ ಮಾಡಲು ಬಳಸಲಾಗಿದೆ. ಒಳಗಿನ ಗೋಡೆಗಳು 275 ಮಿಮೀ ದಪ್ಪವಿರುವ ಉತ್ತಮ ಗುಣಮಟ್ಟದ ಎಂ50-ದರ್ಜೆಯ ಬಲವರ್ಧಿತ ಕಾಂಕ್ರೀಟ್ ಭಾಗಗಳಾಗಿವೆ. ಇವುಗಳನ್ನು ಸಂಕೀರ್ಣವಾದ ಗ್ರೌಟಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ಜೋಡಿಸಲಾಗಿದೆ' ಎಂದು ಯೋಜನೆಯ ತಾಂತ್ರಿಕ ತಜ್ಞರು ವಿವರಿಸುತ್ತಾರೆ.
ಬೌಬಜಾರ್ಗೆ ಪ್ರದೇಶದಲ್ಲಿ ಈ ಹಿಂದೆ ಪತ್ತೆಯಾಗದ ನೀರಿನ ಸೆಲೆಗಳಿವೆ. ಆದರೆ, ಇದು ಕೂಡ ಮುಂದಿನ ವರ್ಷ ಮೇ-ಜೂನ್ ವೇಳೆಗೆ ಬಗೆಹರಿಯಲಿದೆ. ಯಾವುದೂ ಅಸಾಧ್ಯವಲ್ಲ. ಇಡೀ ಯೋಜನೆಯು ಒಂದು ಸವಾಲಾಗಿತ್ತು, ಈ ಸವಾಲು ಸ್ವೀಕರಿಸಿ, ಉತ್ತಮವಾಗಿ ಯೋಜನೆಯನ್ನು ಕಾರ್ಯಗತ ಗೊಳಿಸಲಾಗಿದೆ.
- ಕೌಶಿಕ್ ಮಿತ್ರ ಪೂರ್ವ ರೈಲ್ವೆ ಮತ್ತು ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ಭಾರತದ ಮೊದಲ ಮೆಟ್ರೋ
ಕೋಲ್ಕತಾ ಮೆಟ್ರೋ ಈ ನಗರದ ಹೆಗ್ಗುರುತಾಗಿದೆ. ಮೆಟ್ರೋದ ಉತ್ತರ-ದಕ್ಷಿಣ ಮಾರ್ಗದ ಮೊದಲ ವಿಭಾಗವನ್ನು 1984ರಲ್ಲಿಯೇ ಆರಂಭಿಸಲಾಯಿತು. ಇದು ಭಾರತದ ಮೊದಲ ಮೆಟ್ರೋ ರೈಲು ಮಾರ್ಗವಾಗಿದೆ. ಬ್ಲೂ ಲೈನ್ ಅಥವಾ ಲೈನ್ 1 ಎಂದು ಕರೆಯಲಾಗುವ ಈ ಮಾರ್ಗವು ಈಗ ದಕ್ಷಿಣೇಶ್ವರದಿಂದ ನ್ಯೂ ಗರಿಯಾದ ಕವಿ ಸುಭಾಷ್ವರೆಗೆ ಸಾಗುತ್ತದೆ. ದಕ್ಷಿಣೇಶ್ವರದಿಂದ ಬ್ಯಾರಕ್ಪುರದವರೆಗೆ ಉತ್ತರದಲ್ಲಿ ವಿಸ್ತರಿಸಲು ಯೋಜಿಸಲಾಗಿದೆ. ಉತ್ತರ-ದಕ್ಷಿಣ ಮಾರ್ಗದ ಮೆಟ್ರೋದ ನಿಲ್ದಾಣಗಳು ಈಗ ಹಳೆಯದಾಗಿವೆ. ಹಳೆಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಹೊಂದಿವೆ. ಪೂರ್ವ-ಪಶ್ಚಿಮ ಮೆಟ್ರೋದ ನಿಲ್ದಾಣಗಳು ಅತ್ಯಾಧುನಿಕ ನಿರ್ವಣಗಳಾಗಿದ್ದು, ಉತ್ತಮ ಸೌಕರ್ಯಗಳನ್ನು ಹೊಂದಿವೆ. ನಗರಕ್ಕೆ ಇನ್ನೂ ಎರಡು ಮೆಟ್ರೋ ಕಾರಿಡಾರ್ ನಿರ್ವಿುಸುವ ಪ್ರಸ್ತಾಪವಿದೆ.
ಇನ್ನೂ ಇದೆ ಸಮಸ್ಯೆ
2019ರಲ್ಲಿ ಸುರಂಗ ಕೊರೆಯುವ ಯಂತ್ರವು (ಟಿಬಿಎಂ) ಅಂತರ್ಜಲ ಒಳಗೊಂಡಿರುವ ಬಂಡೆಯೊಂದನ್ನು ಪಂಕ್ಚರ್ ಮಾಡಿದ ಹಿನ್ನೆಲೆಯಲ್ಲಿ ಸೀಲ್ಡಾ-ಎಸ್ಪೆಲೕನೇಡ್ ವಿಭಾಗದ ಕಾಮಗಾರಿಗೆ 2019ರಲ್ಲಿ ಕೆಲ ಕಾಲ ಅಡಚಣೆ ಉಂಟಾಗಿತ್ತು. ಇದರಿಂದಾಗಿ ಬೌಬಜಾರ್ ಪ್ರದೇಶದಲ್ಲಿ ಸೋರುವಿಕೆ ಉಂಟಾಗಿತ್ತು. ಅಲ್ಲದೆ, ಕೆಲವು ಕಟ್ಟಡಗಳು ಕುಸಿದುಬಿದ್ದಿದ್ದವು. ನದಿಯ ಸಮೀಪದಲ್ಲಿರುವ ಬ್ರಬೋನ್ ರಸ್ತೆ ಪ್ರದೇಶವು ಅತಿ ಹಳೆಯದಾಗಿದ್ದು, ದಟ್ಟಣೆಯಿಂದ ಕೂಡಿದೆ. ಟಿಬಿಎಂಗಳು ಸುರಂಗ ಕೊರೆಯುತ್ತಿರುವ ಸಂದರ್ಭದಲ್ಲಿ ಇಲ್ಲಿನ ಹಳೆಯ ಕಟ್ಟಡಗಳ ನಿವಾಸಿಗಳನ್ನು ಕೆಲ ಕಾಲ ಹೋಟೆಲ್ಗಳಿಗೆ ಸ್ಥಳಾಂತರಿಸಲಾಗಿತ್ತು. ಆಗ ನೀರಿನ ಸೆಲೆ ಇರುವ ಬಂಡೆಯೊಂದು ಒಡೆದ ಕಾರಣ ಬೌಬಜಾರ್ ಪ್ರದೇಶದಲ್ಲಿ ನೀರು ಸೋರಿಕೆ ಸಮಸ್ಯೆ ತಲೆದೋರಿತು. ಅದನ್ನು ಇದುವರೆಗೂ ಪರಿಹರಿಸಲಾಗಿಲ್ಲ. ಈ ಸಮಸ್ಯೆ ನಿವಾರಿಸುವವರೆಗೆ ಸಂಪೂರ್ಣವಾಗಿ ಪೂರ್ವ-ಪಶ್ಚಿಮ ಕಾರಿಡಾರ್ನಲ್ಲಿ ಸಂಚಾರ ಕಾರ್ಯಾರಂಭ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಯೋಜನೆಯ ಸಂಪೂರ್ಣ ಸಾಮರ್ಥ್ಯ ವನ್ನು ಬಳಸಿಕೊಳ್ಳಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.