ಹೈದರಾಬಾದ್: ಕಾರಿನ ಕಿಟಕಿ ಕ್ಲೋಸ್ ಮಾಡುತ್ತಿದ್ದಾಗ 9 ವರ್ಷದ ಬಾಲಕಿಯ ಕುತ್ತಿಗೆ ಸಿಲುಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ವರದಿಯಾಗಿದೆ.
ಬೊಜ್ಜಗುದೆಮ್ ಎಂಬ ಹಳ್ಳಿಯಲ್ಲಿ ಸೋಮವಾರ ಮದುವೆ ಸಮಾರಂಭ ಮುಗಿದ ನಂತರ ಈ ದುರಂತ ಸಂಭವಿಸಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.
ಮದುವೆ ಬಳಿಕ ನವದಂಪತಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಬಾಲಕಿ, ಕಿಟಕಿಯ ಹೊರಗೆ ತಲೆ ಹಾಕಿ ಹಾಡು ಹೇಳುತ್ತಾ, ನೃತ್ಯ ಮಾಡುತ್ತಾ ಮೈಮರೆತಿದ್ದಳು. ಇದನ್ನು ಗಮನಿಸದ ಚಾಲಕ, ವಿಂಡೋ ಕ್ಲೋಸ್ ಮಾಡಲು, ಪವರ್ ವಿಂಡೋ ಸ್ವಿಚ್ ಒತ್ತಿದ್ದಾರೆ. ಇದರಿಂದ ಬಾಲಕಿಯ ಕುತ್ತಿಗೆ, ಕಿಟಕಿಗೆ ಸಿಲುಕೊಂಡಿದೆ. ಆಕೆ ಉಸಿರುಕಟ್ಟಿ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತ ಬಾಲಕಿಯನ್ನು ವರನ ಸಂಬಂಧಿ ಬನೋತ್ ಇಂದ್ರಜಾ ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ಬಾಲಕಿಯ ತಂದೆ ಬನೋತ್ ವೆಂಕಟೇಶ್ವರಲು ಎಂಬುವವರು ಚಾಲಕ ಶೇಖರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.